ಗದಗ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಸಮಸ್ಯೆಯೊಂದು ದಿಢೀರ್ ತಲೆ ಎತ್ತಿ ನಿಂತಿದೆ. ಹೌದು, ಜಮೀನುಗಳ ಸರ್ವೇ ಕಾರ್ಯ ವೇಳೆ ಒಂದು ರಸ್ತೆ ಇರುವ ಜಾಗ ಓರ್ವ ರೈತನಿಗೆ (ಮಡ್ಡಿ ಕುಟುಂಬಸ್ಥರು) ಸೇರಿದ್ದು ಎಂಬ ವಿಚಾರ ಗೊತ್ತಾಗಿತ್ತು. ಹಾಗಾಗಿ ಆ ಜಮೀನಿನ ರೈತ ಈಗ ಯಾವುದೇ ಸೂಚನೆ ನೀಡದೆ ರಸ್ತೆ ಬಂದ್ ಮಾಡಿ ಕುಳಿತಿದ್ದಾನೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಯಳವತ್ತಿ ಗ್ರಾಮದಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಸರ್ವೇ ಕಾರ್ಯ ಮಾಡಿದಾಗ ಆ ರಸ್ತೆಯ ಜಾಗ ಮಡ್ಡಿ ಕುಟುಂಬಕ್ಕೆ ಸೇರಿದ್ದೆಂದು ತಿಳಿದುಬಂದಿತ್ತು. ಹಾಗಾಗಿ, ಮಡ್ಡಿ ಕುಟುಂಬಸ್ಥರು ತಮ್ಮ ಜಮೀನಿನಲ್ಲಿರುವ ರಸ್ತೆ ಅಗೆದು, ಮುಳ್ಳುಕಂಟಿಗಳನ್ನು ಹಾಕಿ ಬಂದ್ ಮಾಡಿದ್ದಾರೆ. ಪರಿಣಾಮ, ಈ ಮಾರ್ಗದ ಮೂಲಕ ಬೇರೆ ಜಮೀನುಗಳಿಗೆ ಹೋಗಲಾಗದೆ ರೈತರು ತೊಂದರೆಗೆ ಸಿಲುಕಿದ್ದಾರೆ.
ಈ ಘಟನೆ ನಡೆದು ಒಂದು ವಾರ ಕಳೆದರೂ ಇನ್ನೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಕಳೆದ ವಾರ ಜಮೀನಿಗೆ ಹೋಗಲು ನಮಗೊಂದು ರಸ್ತೆಯ ಅನುಕೂಲ ಮಾಡಿಕೊಡಿ ಎಂದು ರೈತರು ಪ್ರತಿಭಟನೆ ಮಾಡಿದ್ದರು. ಇತ್ತ ಮಡ್ಡಿ ಕುಟುಂಬದ ರೈತರು ತಮ್ಮ ರಸ್ತೆಯನ್ನು ಬಿಟ್ಟು ಕೊಡುತ್ತಿಲ್ಲ.
ಸದ್ಯ ಅಲ್ಲೇ ಇರುವ ಗೋರಿಗಳನ್ನು (ಸರ್ಕಾರಿ ಜಾಗ) ತೆರವುಗೊಳಿಸಲು ಕಾನೂನು ಅಡೆತಡೆಗಳಿವೆ. ಸ್ಥಳಕ್ಕೆ ಲಕ್ಷ್ಮೇಶ್ವರ ತಹಶೀಲ್ದಾರ್ ಬ್ರಮರಾಂಭೆ ಭೇಟಿ ನೀಡಿ ರೈತನ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.
ಇದನ್ನೂ ಓದಿ: Night Curfew: ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ, ಏನೆಲ್ಲಾ ನಿರ್ಬಂಧಗಳು?
ಅಲ್ಲೇ ಇರುವ ಗೋರಿಗಳನ್ನು ತೆರವು ಮಾಡಲು ವಿರೋಧ ವ್ಯಕ್ತವಾಗಿದೆ. ಹಾಗಾಗಿ, ಪಕ್ಕದ ಮಡ್ಡಿ ಕುಟುಂಬದ ಜಾಗದಲ್ಲೇ ರಸ್ತೆ ಮಾಡಲು ತಾಲೂಕು ಆಡಳಿತ ಕುಟುಂಬಸ್ಥರ ಮನವೊಲಿಕೆ ಪ್ರಯತ್ನ ನಡೆಸಿದೆ. ಆದರೆ ರೈತ ಮಾತ್ರ ತನ್ನ ಜಾಗ ಬಿಟ್ಟುಕೊಡುತ್ತಿಲ್ಲ, ರಸ್ತೆಯನ್ನು ಬೇರೆಡೆ ನಿರ್ಮಿಸಿ ಅಂತ ಪಟ್ಟು ಹಿಡಿದಿದ್ದಾನೆ.