ಗದಗ:ನವಿಲುತೀರ್ಥ ಡ್ಯಾಂನಿಂದ ಮತ್ತೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಗದಗ ಜಿಲ್ಲೆಯ ಹಲವಾರು ಗ್ರಾಮಗಳು ಇದೀಗ ಮರಳಿ ಪ್ರವಾಹಕ್ಕೆ ಸಿಕ್ಕು ಮುಳುಗಡೆಯಾಗುತ್ತಿವೆ. ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಕೊಣ್ಣೂರ, ಬೂದಿಹಾಳ, ಕಪ್ಪಲಿ, ಗಾಡಗೋಳಿ, ಹೊಳೆಮಣ್ಣೂರು, ವಾಸನ ಹಾಗೂ ಮೆಣಸಗಿ ಸೇರಿದಂತೆ ಹಲವು ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ನರಗುಂದ ತಾಲೂಕಿನ ವಾಸನ ಗ್ರಾಮಸ್ಥರು ಜಾನುವಾರಗಳ ಸಮೇತ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ದನಕರುಗಳನ್ನು ಟ್ರ್ಯಾಕ್ಟರ್ನಲ್ಲಿ ಸುರಕ್ಷತ ಸ್ಥಳಗಳಿಗೆ ಸಾಗಿಸುತ್ತಿದ್ದಾರೆ. ಹುಬ್ಬಳ್ಳಿ-ವಿಜಯಪುರ ಸಂಪರ್ಕ ಕಲ್ಪಿಸೋ ರಾಷ್ಟ್ರೀಯ ಹೆದ್ದಾರಿ ಸಹ ಕೊಚ್ಚಿಕೊಂಡು ಹೋಗಿದೆ. ಅಲ್ಲದೇ ಜಮೀನುಗಳಿಗೆ ಭಾರೀ ನೀರು ನುಗ್ಗಿದ ಪರಿಣಾಮ ರೈತರು ಅಲ್ಪಸ್ವಲ್ಪ ಬೆಳೆದ ಬೆಳೆಗಳೆಲ್ಲ ನೀರುಪಾಲಾಗಿದೆ.
ಈ ಮುಂಚೆಯೂ ಪ್ರವಾಹದಲ್ಲಿ ಜನ ಮನೆಗಳನ್ನು ಕಳೆದುಕೊಂಡು ಆಶ್ರಯವಿಲ್ಲದೇ ಪರಿತಪಿಸಿದ್ದರು. ಈಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಪ್ರವಾಹ ಪೀಡಿತ ಪ್ರದೇಶದಲ್ಲಿ ಶೀಘ್ರವೇ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸಂತ್ರಸ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.