ಗದಗ:ಪ್ರವಾಹಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ವೃದ್ಧೆಯೊಬ್ಬರು ನೆರವಿಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕೈಮುಗಿದು ಬೇಡಿಕೊಂಡಿರುವ ದೃಶ್ಯ ಕಲ್ಲು ಹೃದಯವನ್ನೂ ಕರಗಿಸುವಂತಿದೆ.
ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಮಲಪ್ರಭಾ ನದಿಯಿಂದ 15ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ. ರೋಣ ತಾಲೂಕಿನ ಹೊಳೆ ಆಲೂರು ಗ್ರಾಮವೂ ಪ್ರವಾಹಕ್ಕೀಡಾಗಿದೆ. ಇದೇ ಗ್ರಾಮದ ವೃದ್ಧೆ ಯಲ್ಲಮ್ಮ ಕೊಣ್ಣೂರ ಪ್ರವಾಹದಲ್ಲಿ ಮನೆಯನ್ನು ಕಳೆದುಕೊಂಡಿದ್ದಾರೆ. ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಬಳಿ ಮನೆ ಕಟ್ಟಿಸಿಕೊಡುವಂತೆ ವೃದ್ಧೆ ಕೈ ಮುಗಿದು ಬೇಡಿಕೊಂಡಿದ್ದಾರೆ.
ಮೂಕ ಪ್ರಾಣಿಗಳ ರೋಧನೆ :
ಎಲ್ಲೆಲ್ಲೂ ನೀರೇ ತುಂಬಿದ್ದು, ಆಹಾರ ಸಿಗದೆ ಮೂಕ ಪ್ರಾಣಿಗಳ ರೋಧನೆ ಹೇಳ ತೀರದಾಗಿದೆ. ಆಹಾರ ಸಿಗದೇ ಶ್ವಾನಗಳು, ಬೆಕ್ಕುಗಳು, ಮಂಗಗಳು ಹಸಿವಿನಿಂದ ಸಾವನ್ನಪ್ಪುತ್ತಿವೆ. ಮೂಕ ಪ್ರಾಣಿಗಳ ದಾರುಣ ಸ್ಥಿತಿ ಕರುಣಾಜನಕವಾಗಿದೆ.
ಇತ್ತ ಮಲಪ್ರಭೆ.. ಅತ್ತ ತುಂಗಭದ್ರೆ :
ಜಿಲ್ಲೆಯ ಎರಡು ಕಡೆಯಿಂದ ಪ್ರವಾಹದ ಭೀತಿ ಎದುರಾಗಿದ್ದು, ಇತ್ತ ಮಲಪ್ರಭೆ ಶಾಂತಳಾಗುತ್ತಿದ್ದರೆ, ಅತ್ತ ತುಂಗಭದ್ರೆ ಆರ್ಭಟಿಸುತ್ತಿದ್ದಾಳೆ. ಒಂದುಕಡೆ ಮಲಪ್ರಭಾ, ಬೆಣ್ಣೆ ಹಳ್ಳದಿಂದ ಜಲಕಂಟಕ ಎದುರಾಗಿದ್ದು ಕ್ರಮೇಣವಾಗಿ ಪ್ರವಾಹ ಕಡಿಮೆಯಾಗುತ್ತಾ ಬರುತ್ತಿದೆ. ಆದರೆ, ಇದೀಗ ಮತ್ತೊಂದು ಕಡೆ ತುಂಗಭದ್ರೆ ತುಂಬಿ ಹರಿಯುತ್ತಿದೆ. ಜಿಲ್ಲೆಯ ಉತ್ತರ ಭಾಗ ಶಿರಹಟ್ಟಿ, ಮುಂಡರಗಿ ಭಾಗದಲ್ಲಿ ತುಂಗಭದ್ರೆ ಅಬ್ಬರಿಸಿ ಬೊಬ್ಬರಿಯುತ್ತಿದ್ದಾಳೆ. ತುಂಗಭದ್ರಾ ನದಿಪಾತ್ರದ ಜಿಲ್ಲೆಯ ಹೊಳೆ ಇಟಗಿ, ಸಾಸಲವಾಡ, ಹಮ್ಮಗಿ, ವಿಠಲಾಪೂರ, ಗುಮ್ಮಗೋಳ, ಹಳೆಸಿಂಗಟಾಲೂರ ಗ್ರಾಮಗಳಿಗೆ ನೀರು ನುಗ್ಗಿದೆ. ಪರಿಣಾಮ ಗ್ರಾಮದ ಹತ್ತಾರು ಮನೆಗಳು ಮುಳಗಡೆಯಾಗಿವೆ. ಅಲ್ಲದೇ ಗ್ರಾಮದ ಬಸ್ ನಿಲ್ದಾಣ,ಸರ್ಕಾರಿ ಶಾಲೆ ಸೇರಿದಂತೆ ದೇವಸ್ಥಾನಗಳೂ ಸಹ ಮುಳಗಡೆಯಾಗಿವೆ. ಶಿಂಗಟಾಲೂರು ಏತ ನೀರಾವರಿ ಬ್ಯಾರೇಜ್‌ನಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದು, ಬ್ಯಾರೇಜ್‌ನ ಎಲ್ಲ ಗೇಟ್‌ಗಳನ್ನೂ ಸಿಬ್ಬಂದಿ ತೆರೆವುಗೊಳಿಸಿದ್ದಾರೆ. ಇದರಿಂದಾಗಿ ನದಿ ದಡದ ಗ್ರಾಮಸ್ಥರು ಪ್ರವಾಹದ ಆತಂಕದಲ್ಲಿದ್ದಾರೆ.