ಗದಗ/ಹುಬ್ಬಳ್ಳಿ : ಮಹದಾಯಿ ಕುರಿತು ಸುಪ್ರೀಂಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಹಿನ್ನೆಲೆ ಗದಗ ಮತ್ತು ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಆಚರಣೆ ಮಾಡಲಾಯಿತು.
ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಹಾಗೂ ಶಂಕರಪ್ಪ ಅಂಬಲಿ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು. ಈ ಸಂಭ್ರಮಾಚರಣೆಯಲ್ಲಿ ರೈತರಿಗೆ ಬಿಜೆಪಿ ಕಾರ್ಯಕರ್ತರು ಸಹ ಸಾಥ್ ನೀಡಿದರು. ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಹೋರಾಟಗಾರರು ಸಂಭ್ರಮಿಸಿದ್ರು. ಇತ್ತ ಹುಬ್ಬಳ್ಳಿಯಲ್ಲೂ ಮಹದಾಯಿ ಹೋರಾಟಗಾರರು ಹಾಗೂ ರೈತ ಮುಖಂಡರು ನಗರದ ಚೆನ್ನಮ್ಮ ವೃತ್ತದ ಬಳಿ ವಿಜಯೋತ್ಸವ ಆಚರಿಸಿದರು.
ಕರ್ನಾಟಕ ರಾಜ್ಯಕ್ಕೆ ಮಹದಾಯಿ 13.5 ಟಿಎಂಸಿ ನೀರು ಬಂದಿರುವುದು ಸ್ವಾಗತಾರ್ಹ. ಕೇಂದ್ರ ಹಾಗೂ ಸುಪ್ರೀಂಕೋರ್ಟ್ ನಿರ್ಧಾರ ಸ್ವಾಗತಾರ್ಹ ಎಂದು ರೈತ ಮುಖಂಡರು ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ ಹಾಗೂ ಕರವೇ ಜಿಲ್ಲಾಧ್ಯಕ್ಷ ಅಮೃತ ಇಜಾರಿ, ಮಹಾದಾಯಿ ಹೋರಾಟದಲ್ಲಿ ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು. ಬಜೆಟ್ನಲ್ಲಿ 2 ಸಾವಿರ ಕೋಟಿ ರೂ. ಹಣ ಈ ಯೋಜನೆಗಾಗಿ ಮೀಸಲಿಡಬೇಕು. ರೈತರ ಮೇಲಿನ ಎಲ್ಲ ಕೇಸ್ಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.