ಗದಗ: ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿರುವ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಮದ್ಯದಂಗಡಿ ತೆರೆದಿರುವ ಮಾಲೀಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಹಳೇ ಬಸ್ ನಿಲ್ದಾಣ ಬಳಿಯ ಪಾನ್ಶಾಪ್ ಮಾಲೀಕನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ, ನಿರ್ಬಂಧಿತ ವಲಯ ಎಂದು ಘೋಷಿಸಲಾಗಿದೆ. ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಆದರೆ ಮದ್ಯದ ಅಂಗಡಿಯನ್ನು ಮಾತ್ರ ತೆರೆಯಲಾಗಿದೆ. ಎಷ್ಟೇ ಮನವಿ ಮಾಡಿಕೊಂಡರೂ ಮಾಲೀಕರು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದರು.
ಮದ್ಯ ಖರೀದಿಗೆ ಬರುವ ಜನರಿಂದ ಮತ್ತಷ್ಟು ಕೊರೋನಾ ಹರಡುವ ಸಾಧ್ಯತೆ ಇದೆ ಎಂಬ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪಾನ್ಶಾಪ್ ಮಾಲೀಕನಿಗೆ ಸೋಂಕು ತಗುಲಿದ ಕಾರಣ, ಆತನ ಪಾನ್ ತಿಂದವರಿಗೆಲ್ಲಾ ಭೀತಿ ಶುರುವಾಗಿದೆ. ಪಾನ್ ತಿಂದವರ ಹುಡುಕಾಡಲು ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ.