ಗದಗ: ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದ ಮೃತ್ಯುಂಜಯ ವಸ್ತ್ರದ ಎಂಬುವರು ವೃತ್ತಿಯಲ್ಲಿ ವಕೀಲರಾಗಿದ್ದರೂ ಕೃಷಿ ಇವರ ಪ್ರವೃತ್ತಿಯಾಗಿದೆ. ಪ್ರತಿ ವರ್ಷ ಏನಾದರೊಂದು ಹೊಸ ಪ್ರಯೋಗ ಮಾಡೋದು, ಅದರಲ್ಲಿ ಹೊಸತನ ಕಂಡುಕೊಳ್ಳುವುದು ಇವರ ಹವ್ಯಾಸ.
ಹಾಗೆಯೇ ಬಹಳಷ್ಟು ಸಾರಿ ಕೃಷಿಯಲ್ಲಿ ಬೇರೆ ಬೇರೆ ಬೆಳೆ ಪ್ರಯೋಗ ಮಾಡಿ ಕೈಸುಟ್ಟು ಕೊಂಡಿದ್ದಾರೆ. ಆದರೆ ಕಳೆದ ಲಾಕ್‌ಡೌನ್‌ನಲ್ಲಿ ಹುಟ್ಟಿಕೊಂಡ ಇನ್ನೊಂದು ಹೊಸ ಪ್ರಯೋಗದಲ್ಲಿ ಯಶಸ್ವಿಯಾದರು. ಅದು ಎಷ್ಟರಮಟ್ಟಿಗೆ ಅಂದರೆ ಕ್ವಿಂಟಲ್ಗೆ ಸುಮಾರು 1 ಲಕ್ಷ 70 ಸಾವಿರಕ್ಕಿಂತಲೂ ಹೆಚ್ಚು ಬೆಲೆ ಬರುವ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ.
ಅಂದಹಾಗೆ ಇವರು ಕಪ್ಪುಗೋಧಿ ಬೆಳೆ ಬೆಳೆದು ಸಕ್ಸಸ್ ಆಗಿದ್ದಾರೆ. ಈ ಕಪ್ಪು ಗೋದಿಯನ್ನು ಕರ್ನಾಟಕದಲ್ಲಿ ಬೆಳೆಯೋದಿಲ್ಲ. ಅದರಲ್ಲೂ ದಕ್ಷಿಣ ಭಾರತದಲ್ಲಿ ಈ ಬೆಳೆಯನ್ನು ಎಲ್ಲಿಯೂ ಬೆಳೆಯೋದಿಲ್ಲ. ಬದಲಾಗಿ ಉತ್ತರ ಭಾರತದ ಕೇವಲ ನಾಲ್ಕೇ ರಾಜ್ಯಗಳಲ್ಲಿ ಬೆಳೆಯಲಾಗ್ತಿದೆ. ಉತ್ತರ ಪ್ರದೇಶ ಬಿಹಾರ ಪಂಜಾಬ್ ಹರಿಯಾಣ ಜಿಲ್ಲೆಗಳಲ್ಲಿ ಮಾತ್ರ ಅದೂ ಆಯ್ದ ಭಾಗಗಳಲ್ಲಿ ಬೆಳೆಯುತ್ತಾರೆ. ಇಂತಹ ಒಂದು ಬೆಳೆಯನ್ನು ಗದಗ ಜಿಲ್ಲೆಗೆ ಪರಿಚಯ ಮಾಡಿಕೊಟ್ಟಿದ್ದಾರೆ.
ಈ ಬೆಳೆಗೆ ಇಷ್ಟೊಂದು ಬೆಲೆ ಯಾಕೆ?. ಹೌದು, ಇದರಲ್ಲಿ ಔಷಧಿಯ ಗುಣವಿದ್ದು ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ. ಆ್ಯಂಟಿ ಆಕ್ಸಿಡೆಂಟ್, ವಿಟಿಮಿನ್ ಬಿ, ಪಾಲಿಕ್ ಆ್ಯಸಿಡ್, ಐರನ್, ಕಾಪರ್ ಪೊಟ್ಯಾಷಿಯಂ, ಪೈಬರ್, ಜಿಂಕ್, ಮ್ಯಾಗ್ನೇಷಿಯಂ ಸೇರಿದಂತೆ ಹಲವು ಲವಣಾಂಶಗಳನ್ನು ಹೊಂದಿದೆ. ಹಾಗಾಗಿ ಬಹುತೇಕ ಪೋಷಕಾಂಶಗಳನ್ನು ಹೊಂದಿದ ಈ ಬೆಳೆಗೆ ಬಲು ಬೇಡಿಕೆ ಇದೆ. ಡಯಾಬಿಟಿಸ್ ರೋಗಗಳಿಗೆ, ಕ್ಯಾನ್ಸರ್, ರಕ್ತದ ಒತ್ತಡ ಹತೋಟಿಗೆ, ಒಬ್ಯಾಸಿಟಿ ಬಿಪಿ ಇರುವಂತ ರೋಗಿಗಳಿಗೆ ಇದು ರಾಮಬಾಣವಾಗಿದೆ.
ಇನ್ನು ಈ ಭಾಗದಲ್ಲಿ ಸಾಮಾನ್ಯವಾಗಿ ಕೆಂಪು ಗೋಧಿ ಬೆಳೆಯಲಾಗ್ತಿದೆ. ಕಪ್ಪು ಗೋಧಿ ಬಹುತೇಕ ಜನರಿಗೆ ಗೊತ್ತಿಲ್ಲ. ಇಂತಹ ಬೆಳೆಗಳು ನಮ್ಮ ರೈತರಿಗೂ ಪರಿಚಯ ಆಗಲಿ. ಅವರೂ ಸಹ ಇಂತಹ ಬೆಳೆಗಳಿಂದ ಅಭಿವೃದ್ಧಿ ಹೊಂದಲಿ ಅಂತಾರೆ ವಕೀಲ ಮೃತ್ಯುಂಜಯನವರು. ಇದರ ಜೊತೆಗೆ ಕಡಲೆ, ಜೋಳ, ಮೆಣಸಿನಕಾಯಿ ಹೀಗೆ ಹಲವು ಬೆಳೆಗಳನ್ನು ಸಹ ಇವರು ಬೆಳೆಯುತ್ತಾರೆ. ಇದಕ್ಕಾಗಿ ಓರ್ವ ರೈತನನ್ನು ಇಟ್ಟುಕೊಂಡಿದ್ದಾರೆ. ಅವರೇ ಇವರ ಪ್ರಯೋಗಕ್ಕೆ ಸಾಥ್ ಕೊಟ್ಟು ವಕೀಕರು ಹೇಳಿದಂತೆ ಉಳುಮೆ ಮಾಡ್ತಿದ್ದಾರೆ.
ಮೃತ್ಯುಂಜಯ ಅವರಿಗೆ ಈ ಪ್ರಯೋಗ ಹೊಳೆದಿದ್ದು ಲಾಕ್‌ಡೌನ್ ಟೈಮ್ನಲ್ಲಿ. ಲಾಕ್ ಡೌನ್ ಟೈಮ್ ನಲ್ಲಿ ಖಾಲಿ ಕುಳಿತಾಗ ಗೂಗಲ್ ಸರ್ಚ್ ಮಾಡ್ತಾ ಈ ಹೊಸ ಪ್ರಯೋಗ ಹೊಳೆದಿದೆ. ಕೊನೆಗೆ ಇದರಲ್ಲಿ ಯಶಸ್ವಿಯಾಗಿದ್ದಾರೆ. ಜನ ಈಗ ಇವರ ಪ್ರಯೋಗಕ್ಕೆ ಪಿಧಾ ಆಗಿ ಬೆಳೆ ನೋಡೋದಕ್ಕೆ ಬರ್ತಿದ್ದಾರೆ. ನಾವು ಈ ರೀತಿ ಬೆಳೆ ಬೆಳೆಯಬಹುದು ಅಂತ ಅವರಿಂದ ಮಾಹಿತಿ ಪಡೆದುಕೊಳ್ತಿದ್ದಾರೆ.