ಗದಗ: ಅವರೆಲ್ಲಾ ಮೂರು ಜಿಲ್ಲೆಗಳ ಗಡಿಗೆ ಹೊಂದಿಕೊಂಡು ಜೀವಿಸುತ್ತಿರುವ ಹಳ್ಳಿಯ ಜನರು. ಪ್ರತಿ ಬಾರಿ ಪ್ರವಾಹ ಬಂತು ಅಂದರೆ ಇವರಿಗೆ ಊರು ಬಿಡದೆ ಬೇರೆ ದಾರಿಯಿಲ್ಲ.
ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದಂತೆ ಜನ, ಜಾನುವಾರು ಸಮೇತ ಊರು ಬಿಟ್ಟು ನಾಲ್ಕು ಕಿಲೋ ಮೀಟರ್ ದೂರ ಎತ್ತರದ ಪ್ರದೇಶಕ್ಕೆ ಹೋಗಿ ಜೀವ ಉಳಿಸಿಕೊಳ್ಳುತ್ತಾರೆ. ಇವರಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕೆನ್ನುವ ಆಗ್ರಹ ವರ್ಷಗಳು ಕಳೆದರೂ ಈಡೇರಿಲ್ಲ.
ಬೆಳಗಾವಿ ಜಿಲ್ಲೆಯಲ್ಲಿ ಎಡೆಬಿಡದೆ ಮಳೆಯಾಗುತ್ತಿರುವುದರಿಂದ ಮಲಪ್ರಭಾ ನದಿಯಿಂದ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ, ಗದಗ ಜಿಲ್ಲೆ ನರಗುಂದ ತಾಲೂಕಿನ ಲಖಮಾಪುರ ಗ್ರಾಮಸ್ಥರಿಗೆ ಗ್ರಾಮ ಬಿಟ್ಟು ಹೊರಗೆ ಬನ್ನಿ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈಗಾಗಲೇ ಲಖಮಾಪುರ ಗ್ರಾಮದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ತಾಲೂಕು ಆಡಳಿತ ಎರಡು ದಿನಗಳ ಹಿಂದೆ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಸಭೆ ನಡೆಸಿದೆ. ಪಕ್ಕದ ಬೆಳ್ಳೇರಿ ಗ್ರಾಮದ ಡಿಪ್ಲೋಮಾ ಕಾಲೇಜಿನಲ್ಲಿ ಕಾಳಜಿ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ಪ್ರವಾಹ ಬರುವ ಸಾಧ್ಯತೆ ಇರುವ ಕಾರಣ ಅಲ್ಲಿಗೆ ಗ್ರಾಮಸ್ಥರು ಎಲ್ಲರೂ ಸ್ಥಳಾಂತರವಾಗುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ನಿರಂತರ ಮಳೆ: ಎಚ್ಚರಿಕೆ ವಹಿಸುವಂತೆ ಲಕಮಾಪುರ ಗ್ರಾಮಸ್ಥರಿಗೆ ಸೂಚನೆ
ಆದರೆ, ಮಲಪ್ರಭಾ ಪ್ರವಾಹದಲ್ಲೇ ನಾವೆಲ್ಲರೂ ಕೊಚ್ಚಿ ಹೋಗ್ತೇವೆ, ಪ್ರಾಣ ಬಿಡ್ತೇವೆ, ನಮ್ಮ ಜಮೀನು- ಜಾನುವಾರು ಬಿಟ್ಟು ನಾವೆಲ್ಲಿಗೂ ಬರೋದಿಲ್ಲ. ಗ್ರಾಮದ ಪಕ್ಕದಲ್ಲಿಯೇ ನಮಗೆ ಶೆಡ್ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಪಟ್ಟು ಹಿಡದು ಕೂತಿದ್ದಾರೆ.
2019 ರಲ್ಲಿ ಪ್ರವಾಹ ಬಂದ ನಂತರ ನಮಗೆ ಖಾಯಂ ಸೂರು ಕಲ್ಪಿಸಲಿಲ್ಲ. ಇದುವರೆಗೂ ಗ್ರಾಮ ಸ್ಥಳಾಂತರವಾಗಿಲ್ಲ, ಸೇತುವೆ ದುರಸ್ಥಿಗೊಂಡಿಲ್ಲ. ಪದೇ ಪದೇ ಎಷ್ಟು ಬಾರಿ ನಾವು ಗ್ರಾಮದಿಂದ ಹೊರಗೆ ಹೋಗಿ ಜೀವನ ಮಾಡೋದು?. ನಮ್ಮನ್ನು ಶಾಶ್ವತ ಸ್ಥಳಾಂತರ ಮಾಡಿ. ಇಲ್ಲಾ ಅಂದ್ರೆ ನಾವು ಗ್ರಾಮ ಬಿಟ್ಟು ಬರೋದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಗ್ರಾಮದ ಜನರು ಪಟ್ಟು ಹಿಡಿದು ಕೂತಿರುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಯಾಕೆಂದರೆ ಈ ಗ್ರಾಮ ಬೆಳಗಾವಿ ಮತ್ತು ಗದಗ ಜಿಲ್ಲೆಗಳ ಗಡಿ ಭಾಗದಲ್ಲಿ ಇದೆ. ಗ್ರಾಮಸ್ಥರ ಮನೆಗಳು ಗದಗ ಜಿಲ್ಲೆಯಲ್ಲಿದ್ದರೆ, ಜಮೀನು ಬೆಳಗಾವಿ ಜಿಲ್ಲೆಯಲ್ಲಿವೆ. ನಮ್ಮ ಜಮೀನು ಇರುವ ಕಡೆ ನಮಗೆ ಸೂರು ಕಲ್ಪಿಸಿ ಸ್ಥಳಾಂತರ ಮಾಡಿ ಎಂಬುವುದು ಗ್ರಾಮಸ್ಥರ ಒತ್ತಾಯವಾಗಿದೆ.
ಆದರೆ, ಎರಡೂ ಜಿಲ್ಲೆಯ ಜಿಲ್ಲಾಡಳಿತಗಳಿಗೆ ಕೆಲವು ತಾಂತ್ರಿಕ ಸಮಸ್ಯೆಗಳು ಇರುವುದರಿಂದ ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಆದ್ದರಿಂದ ಈ ಬಾರಿನೂ ಪ್ರವಾಹ ಬಂದರೆ ಜನ ಸಂಕಷ್ಟ ಅನುಭವಿಸಬೇಕಾಗಿದೆ. ಮಲಪ್ರಭಾ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಟ್ಟರೆ ಈ ಹಳ್ಳಿ ನಡುಗಡ್ಡೆಯಾಗಿ ಊರೊಳಗೆ ನೀರು ಪ್ರವೇಶ ಮಾಡುವುದು ಖಂಡಿತ.
ಇದರಿಂದ ಉಳಿದ ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತದೆ. ಹಲವು ಮನೆಗಳು ನೆಲಕಚ್ಚಿ ಸಾವು- ನೋವು ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ, ಜಿಲ್ಲಾಡಳಿತ ಮತ್ತು ಹಳ್ಳಿಯ ಜನರು ಯಾವುದಾದರು ಒಂದು ನಿರ್ಧಾರಕ್ಕೆ ಬರಬೇಕಾದ ಅನಿವಾರ್ಯತೆ ಇದೆ.
ಇದನ್ನೂ ಓದಿ: ಬೆಳಗಾವಿ: ಮಳೆಗಾಲದಲ್ಲಿ ಬಳ್ಳಾರಿ ನಾಲಾ ನೀರಿನಿಂದ ತಪ್ಪಿಲ್ಲ ರೈತರ ಗೋಳು