ಗದಗ: ಕರ್ತವ್ಯದ ಸಮಯದಲ್ಲಿ ಜನರ ಪ್ರಾಣ ರಕ್ಷಣೆಗಾಗಿ ನಿಜಾಮನ ಸೈನಿಕರ ಗುಂಡಿನ ದಾಳಿಗೆ ಎದೆಯೊಡ್ಡಿ ಪ್ರಾಣತ್ಯಾಗ ಮಾಡಿದ ಪೊಲೀಸರ ಸಾಹಸ ಸ್ಮರಿಸುವ ಲಡಾಯಿ ಕಟ್ಟೆಯೊಂದು ಗದಗ ಜಿಲ್ಲೆಯ ರೋಣ ತಾಲೂಕಿನ ಹಾಲಕೆರೆ ಮತ್ತು ಸಂಗನಾಳ ಗ್ರಾಮದ ಮಧ್ಯದ ಹೊಲದಲ್ಲಿದೆ. ಆದರೆ, ಪ್ರಾಣತ್ಯಾಗ ಮಾಡಿದ ಪೊಲೀಸರಿಗೆ ಗೌರವ ಸಲ್ಲಿಸಲು ಇಲಾಖೆಯವರು 39 ವರ್ಷಗಳಿಂದ ಬರುತ್ತಿಲ್ಲ. ಲಡಾಯಿ ಕಟ್ಟೆ ಅನಾಥವಾಗಿದೆ. ಈ ವರ್ಷದಿಂದಾರೂ ಈ ಮೊದಲಿನ ಪದ್ಧತಿಯಂತೆ ಲಡಾಯಿಕಟ್ಟೆಗೆ ಬಂದು ಸ್ಮರಿಸುವ ಕಾರ್ಯವಾಗಬೇಕಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಲಡಾಯಿ ಕಟ್ಟೆ ಹಿನ್ನಲೆ: ಹೈದರಾಬಾದ್ ನಿಜಾಮನ ಆಳ್ವಿಕೆಗೆ ಒಳಪಡುತ್ತಿದ್ದ ಪ್ರದೇಶಗಳು ಸ್ವಾತಂತ್ರ್ಯಾನಂತರ ಭಾರತದ ಒಕ್ಕೂಟಕ್ಕೆ ಸೇರುವಲ್ಲಿ ವಿಳಂಬವಾದವು. ಅಖಂಡ ಧಾರವಾಡ ಜಿಲ್ಲೆಯ ಹಾಲಕೆರೆ ಗ್ರಾಮವು ಮುಂಬೈ ಪ್ರಾಂತ್ಯದ ಕಟ್ಟಕಡೆಯ ಗ್ರಾಮವಾಗಿತ್ತು. ಶೇ 80ರಷ್ಟು ಈ ಗ್ರಾಮದ ರೈತರ ಜಮೀನುಗಳು ಹೈದರಾಬಾದ್ ಪ್ರಾಂತ್ಯದ ಗ್ರಾಮಗಳಾದ ಮುಧೋಳ, ಕರಮುಡಿ, ಯಲಬುರ್ಗಾ, ಕುಕನೂರ, ಸಂಗನಾಳ ಸೀಮೆಯಲ್ಲಿದ್ದವು. ಆದರೆ, ನಿಜಾಮನ ಸೈನಿಕರಿಂದ ಸದಾ ತೊಂದರೆ ಅನುಭವಿಸುತ್ತಿದ್ದರು.
ಜಮೀನಿನಲ್ಲಿ ಏನೇ ಬೆಳೆ ಬೆಳೆದರೂ ಅದನ್ನು ಆ ಪ್ರಾಂತ್ಯದ ಗ್ರಾಮಗಳಲ್ಲಿಯೇ ಮಾರಬೇಕಾಗಿತ್ತು. ಹೊಲದಲ್ಲಿ ಬೆಳೆದ ಫಸಲು, ದನಗಳಿಗೆ ಹೊಟ್ಟು ಮೇವು ಮನೆಗೆ ತರಲು ಅವಕಾಶ ಇರಲಿಲ್ಲ. ಕೆಲವೊಮ್ಮೆ ಗುಂಪು ಗುಂಪಾಗಿ ಹಾಲಕೆರೆಗೆ ಬಂದು ದರೋಡೆ ಮಾಡುತ್ತಿದ್ದರು. ರಜಾಕರ ಹಾಗೂ ನಿಜಾಮನ ಅನುಯಾಯಿಗಳ ಹಾವಳಿ ಮಿತಿಮೀರಿದಾಗ ಗ್ರಾಮದಲ್ಲಿ ಆಡಳಿತ ನಡೆಸುತ್ತಿದ್ದ ರಾವ್ ಬಹದ್ದೂರ ಮನೆತನದವರು ಹಾಗೂ ಮುಖಂಡರು ಸ್ವಾತಂತ್ರ್ಯದ ನಂತರ ಬಾಂಬೆ ವಿಭಾಗದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಬಾಲಾಸಾಹೇಬ ಗಂಗಾಧರ ಖೇರ್ ಅವರ ಗಮನಕ್ಕೆ ತರುತ್ತಾರೆ.
ಆಗ ಹಾಲಕೆರೆ ಸೀಮೆಯಲ್ಲಿ ಧಾರವಾಡ ಜಿಲ್ಲೆ ವತಿಯಿಂದ ಪೊಲೀಸರ ನೇಮಕ ಮಾಡಲಾಗಿತ್ತು. ಹಗಲು ರಾತ್ರಿಗಳೆನ್ನದೆ ಗ್ರಾಮದ ಆಸ್ತಿ ಹಾಗೂ ನಾಗರಿಕರ ಪ್ರಾಣ, ಮಾನ, ಆಸ್ತಿ ಕಾಪಾಡಲು ಪೊಲೀಸರು ಮುಂದಾಗುತ್ತಾರೆ. 2ನೇ ಮಾರ್ಚ್ 1948ರಂದು ರಜಾಕರು ಗುಂಪು – ಗುಂಪಾಗಿ ಗ್ರಾಮಸ್ಥರ ಮೇಲೆ ದಾಳಿ ಮಾಡುತ್ತಾರೆ. ಸಂಪತ್ತನ್ನು ಲೂಟಿ ಮಾಡಲು ಪ್ರಯತ್ನಿಸುತ್ತಾರೆ. ಆಗ ಪೊಲೀಸರು ಹಾಗೂ ರಜಾಕರ ನಡುವೆ ಗುಂಡಿನ ಚಕಮಕಿ ನಡೆಯುತ್ತದೆ.
ಈ ಸಂದರ್ಭದಲ್ಲಿ ಗ್ರಾಮದಲ್ಲಿ ಹಲವಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಆಗ ಕರ್ತವ್ಯ ಪಾಲನೆಯಲ್ಲಿದ್ದ ಕಾನ್ಸ್ಟೇಬಲ್ಗಳಾದ ರಾಮಪ್ಪ ಪವಾರ, ವೀರನಗೌಡ ಅಯ್ಯನಗೌಡ್ರ ಜೀವದ ಹಂಗನ್ನು ಬದಿಗಿಟ್ಟು ವಿರೋಧಿ ಶಕ್ತಿಗಳನ್ನು ಮಟ್ಟ ಹಾಕುವಾಗ ನಿಜಾಮನ ಸೈನಿಕರ ಗುಂಡಿನ ದಾಳಿಗೆ ಪ್ರಾಣತ್ಯಾಗ ಮಾಡುತ್ತಾರೆ. ನಂತರದ ದಿನಗಳಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದ ಮೇಲೆ ಮುಂಬೈ ಸರ್ಕಾರ ಗಡಿ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನೇಮಿಸಿ ಹಾವಳಿ ತಡೆಯುವಲ್ಲಿ ಯಶಸ್ವಿಯಾಗುತ್ತದೆ.
ಕಾನ್ಸ್ಟೇಬಲ್ಗಳ ಸಾಹಸದ ಸ್ಮರಣಾರ್ಥವಾಗಿ 3ನೇ ಮಾರ್ಚ್ 1948 ರಂದು ಹಾಲಕೆರೆಯಿಂದ ಸಂಗನಾಳ ಕಡೆಗೆ ಹೋಗುವ ಗಡಿ ಭಾಗದ ಹೊಲದಲ್ಲಿ ಅವರ ಹೆಸರಿನಲ್ಲಿ ಲಡಾಯಿ ಕಟ್ಟೆಯನ್ನು ಗ್ರಾಮಸ್ಥರ ಸಹಕಾರದಲ್ಲಿ ಸರ್ಕಾರ ನಿರ್ಮಿಸಿದೆ. ಈ ಮೂಲಕ ಅಂದು ಗ್ರಾಮ ರಕ್ಷಣೆಗಾಗಿ ನಿಂತ ಪೊಲೀಸರಿಗೆ ಗೌರವ ಸಲ್ಲಿಸಲಾಗಿದೆ. ಆದರೆ ಈಗ ಪೊಲೀಸರು ಬಂದು ಇದಕ್ಕೆ ಗೌರವ ಸಲ್ಲಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರ ಅಳಲಾಗಿದೆ.
ಇದನ್ನೂ ಓದಿ : ಕೊರೊನಾ ನಂತರ ರೈತನ ಕೈಹಿಡಿದ ಅನಾನಸ್.. ಬೆಳೆ ಉತ್ತೇಜನಕ್ಕೆ ಎಂ.ಡಿ - 2 ತಳಿ ಪರಿಚಯ