ಕುಷ್ಟಗಿ(ಕೊಪ್ಪಳ): ಕುಷ್ಟಗಿ ಪುರಸಭೆ ನೂತನ ಅಧ್ಯಕ್ಷರಾಗಿ ಗಂಗಾಧರಸ್ವಾಮಿ ಹಿರೇಮಠ ಹಾಗೂ ಉಪಾಧ್ಯಕ್ಷೆಯಾಗಿ ರಾಜೇಶ್ವರಿ ಆಡೂರು ಅಧಿಕಾರ ಸ್ವೀಕರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ನಗರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಸರ್ವ ಸದಸ್ಯರ ಪ್ರೀತಿ ವಿಶ್ವಾಸ ಹಾಗೂ ಸಲಹೆ ಸೂಚನೆಗಳಿಂದ ಕುಷ್ಟಗಿ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸುವೆ. ಕುಡಿಯುವ ನೀರು, ವಿದ್ಯುದ್ದೀಪ, ಸ್ವಚ್ಛತೆ, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ ಸಮಸ್ಯೆ ಸಾಕಷ್ಟಿದೆ. ಅವುಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ ಎಂದರು.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶೌಚಾಲಯಗಳಿಲ್ಲ. ಈ ಹಿನ್ನೆಲೆಯಲ್ಲಿ ಬಸವೇಶ್ವರ ವೃತ್ತ ಸೇರಿದಂತೆ ಜಾಗೆ ಎಲ್ಲಿ ಲಭ್ಯವೋ ಅಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುವುದು. ಈಗಾಗಲೇ ಸುಲಭ ಮಾದರಿ ಶೌಚಾಲಯ ನಿರ್ಮಿಸಲಾಗಿದ್ದರೂ ನಿರುಪಯುಕ್ತವಾಗಿದ್ದು, ಪುನರ್ ಬಳಕೆಗೆ ಕ್ರಮ ಕೈಗೊಳ್ಳುವೆ. ಹಾಗೆಯೇ ಪಟ್ಟಣ ಧೂಳು ಮುಕ್ತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವೆ ಎಂದರು.