ಗದಗ: ಇಂದು ಕರ್ನಾಟಕ ಬಂದ್ ಹಿನ್ನೆಲೆ ನಗರದಲ್ಲಿ ಕರವೇ ಕಾರ್ಯಕರ್ತರಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ನಗರದ ಟಿಪ್ಪು ಸುಲ್ತಾನ್ ಸರ್ಕಲ್ನಲ್ಲಿ ಪ್ರತಿಭಟನೆ ಮಾಡುವ ವೇಳೆ ರಸ್ತೆ ತಡೆ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಲು ಕಾರ್ಯಕರ್ತರು ಯತ್ನಿಸಿದರು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಯತೀಶ್ ಎನ್. ಭೇಟಿ ನೀಡಿ ರಸ್ತೆ ಬಂದ್ ಮಾಡಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಮಾಡದಂತೆ ಸೂಚನೆ ನೀಡಿದರು.
ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ಬಳಿಕ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದರು. ಬಳಿಕ ಮತ್ತೆ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ಬಸ್ ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದರು.
ಈ ವೇಳೆ ಓರ್ವ ಕಾರ್ಯಕರ್ತ ಬಸ್ಗೆ ಅಡ್ಡ ಮಲಗಿ ಪ್ರತಿಭಟನೆ ಮಾಡಲು ಮುಂದಾದಾಗ ಕಾರ್ಯಕರ್ತ ಬಸ್ ಚಕ್ರದಡಿಯಿಂದ ಕ್ಷಣಾರ್ಧದಲ್ಲಿ ಪಾರಾದ ಘಟನೆ ನಡೆಯಿತು. ಬಳಿಕ ಅಲ್ಲಿದ್ದ ಪೊಲೀಸರು ರಸ್ತೆ ತಡೆ ಮಾಡಿದ ಕಾರ್ಯಕರ್ತರನ್ನು ಎಳೆದು ಹಾಕಿದರು.