ಗದಗ: ಹಸಿದವರ ಹೊಟ್ಟೆ ತುಂಬಿಸಲು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಲೂಟಿಕೋರರ ಪಾಲಾಗುತ್ತಿದೆ. ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನ ಸಂಘಟನೆಯೊಂದರ ಕಾರ್ಯಕರ್ತರು ಹಿಡಿದಿರುವ ಘಟನೆ ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.
ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಗದಗ ನಗರದ ರಿಂಗ್ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಹಿಡಿದು, ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಗಳಿಗೆ ಒಪ್ಪಿಸಲಾಗಿದೆ.
ಕೊಪ್ಪಳದಿಂದ ಮಹಾರಾಷ್ಟ್ರ ರಾಯಗಡಕ್ಕೆ ಅಕ್ರಮ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದ್ದು, ಯಾರಿಗೂ ಅನುಮಾನ ಬಾರದಂತೆ ಪಡಿತರ ಅಕ್ಕಿಯನ್ನ ಬೇರೆ ಬ್ಯಾಗ್ಗಳಲ್ಲಿ ಪ್ಯಾಕಿಂಗ್ ಮಾಡಿ ಸಾಗಿಸಲಾಗುತ್ತಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಗದಗ ಗ್ರಾಮೀಣ ಠಾಣೆ ಪಿಎಸ್ಐ ಹಾಗೂ ಆಹಾರ ಇಲಾಖೆ ಅಧಿಕಾರಿಗಳು 50 ಕೆಜಿಯ 250 ಬ್ಯಾಗ್ ಅಕ್ಕಿ ಸಹಿತ ಲಾರಿಯನ್ನ ವಶಕ್ಕೆ ಪಡೆದಿದ್ದಾರೆ.
ಲಾರಿಯಲ್ಲಿರುವುದು ಅನ್ನಭಾಗ್ಯ ಅಕ್ಕಿ ಹೌದೋ, ಅಲ್ಲವೋ ಎಂಬ ಬಗ್ಗೆ ಬೆಳಗಾವಿಗೆ ಪರೀಕ್ಷೆ ಕಳಿಸಿ ವರದಿ ಬಂದ ಬಳಿಕ ದೂರು ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಜಿ ಬಿ ಮಠದ ತಿಳಿಸಿದ್ದಾರೆ.