ಗದಗ: ನೆರೆ ಪರಿಹಾರ ಒದಗಿಸುವಲ್ಲಿ ಸರ್ಕಾರ ತನ್ನ ವಿಫಲತೆಯನ್ನು ಒಪ್ಪಿಕೊಂಡಲ್ಲಿ ಹತ್ತೇ ನಿಮಿಷದಲ್ಲಿ 20 ಸಾವಿರ ಕೋಟಿ ಸಂಗ್ರಹಿಸುವ ಯೋಜನ ಬಗ್ಗೆ ಸಲಹೆ ನೀಡುತ್ತೇನೆ ಎಂದು ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನ್ರು ಸ್ವಾಭಿಮಾನಿಗಳು, ಅದೆಷ್ಟೇ ಭೀಕರ ಪ್ರವಾಹ ಬಂದು ಅಬ್ಬರಿಸಿದರೂ ಸರ್ಕಾರದ ಪರಿಹಾರಕ್ಕಾಗಿ ಕಾದು ಕುಳಿತಿಲ್ಲ. ಆದರೆ ಮಾನವೀಯತೆ ದೃಷ್ಟಿಯಿಂದಲಾದರೂ ಪರಿಹಾರ ಒದಗಿಸಬೇಕಾದ ಸರ್ಕಾರ, ತಾರತಮ್ಯ ನೀತಿ ಅನುಸರಿಸುತ್ತಿದೆ. ಮಡಿಕೇರಿ ಭಾಗದಲ್ಲಿ ಪ್ರವಾಹ ಉಂಟಾದಾಗ ಸರ್ಕಾರ ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿತ್ತು. ಆದರೆ ಉತ್ತರ ಕರ್ನಾಟಕ ಭಾಗದ ಸಂತ್ರಸ್ತರಿಗೆ ಮನೆಯೊಂದಕ್ಕೆ ಕೇವಲ 10 ಸಾವಿರ ರೂಪಾಯಿ ಕೊಟ್ಟು ಕೈ ತೊಳೆದುಕೊಂಡಿದೆ. ಇದ್ರಿಂದ ನೆರೆ ಸಂತ್ರಸ್ತರು ಕಣ್ಣೀರಿನಲ್ಲಿ ದಿನನಿತ್ಯ ಜೀವನ ಸಾಗಿಸ್ತಿದ್ದಾರೆ ಎಂದು ಆರೋಪಿಸಿದರು.
ದಶಕಗಳ ಹಿಂದಿನ ಸಾಂಪ್ರದಾಯಕ ಮನೆಗಳನ್ನು ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ ಸಿ-ಕೆಟಗರಿಗೆ ಸೇರಿಸೋ ಮೂಲಕ ಅಧಿಕಾರಿಗಳು ಅವೈಜ್ಞಾನಿಕ ಸಮೀಕ್ಷೆ ನಡೆಸಿದ್ದಾರೆ. ಬೆಳೆ ನಷ್ಟ ಅನುಭವಿಸಿರೋ ರೈತರಿಗೆ ಪ್ರತಿ ಹೆಕ್ಟೇರ್ಗೆ ಎರಡು ಲಕ್ಷ ರೂಪಾಯಿ ಕೊಡಬೇಕು. ಜೊತೆಗೆ ಕೇಂದ್ರ ಸರ್ಕಾರ ಘೋಷಿಸಿರುವ ಪರಿಹಾರವನ್ನು ಸಂತ್ರಸ್ತರಿಗೆ ಆದಷ್ಟು ಬೇಗ ನೀಡಬೇಕು ಎಂದು ಆಗ್ರಹಿಸಿದರು.