ಗದಗ: ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಸಿಗದ ಹಿನ್ನೆಲೆ, ಅಪಾಘಾತಕ್ಕೀಡಾದ ಗಾಯಾಳುಗಳನ್ನು ಟ್ರ್ಯಾಕ್ಟರ್ನಲ್ಲಿ ಆಸ್ಪತ್ರೆಗೆ ಕರೆ ತಂದರೂ ವೈದ್ಯರು ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಕೇಳಿಬಂದಿದೆ.
ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಬಳಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, 5 ಜನ ಗಾಯಗೊಂಡಿದ್ದರು. ಈ ವೇಳೆ ಸ್ಥಳೀಯರು 108 ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದರು. ಆದರೆ, ಗಾಯಾಳುಗಳು ಗಂಟೆಗಟ್ಟಲೇ ರಸ್ತೆಯಲ್ಲಿ ನರಳುತ್ತಿದ್ದರೂ ಆ್ಯಂಬುಲೆನ್ಸ್ ಬಂದಿರಲಿಲ್ಲ. ಹೀಗಾಗಿ, ಬೇರೆ ದಾರಿ ಕಾಣದೆ ಟ್ರ್ಯಾಕ್ಟರ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ಇಲ್ಲ, ಸಿಬ್ಬಂದಿ ಇಲ್ಲ ಎಂಬ ಕಾರಣ ನೀಡಿ ಚಿಕಿತ್ಸೆ ನೀಡಲು ನಿರಾಕರಿಸಲಾಗಿದೆ ಎನ್ನಲಾಗ್ತಿದೆ. ಕೊನೆಗೆ ಗಾಯಾಳುಗಳನ್ನು ಸಂಬಂಧಿಕರು ಹೊತ್ತುಕೊಂಡು ಹೋಗಿ ಆಸ್ಪತ್ರೆ ಬೆಡ್ ಮೇಲೆ ಹಾಕಿದ್ದಾರೆ. ಆಗ ಚಿಕಿತ್ಸೆ ನೀಡಲು ನಿರಾಕರಿಸಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಗಾಯಾಳುಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಬೈಕ್ನಲ್ಲಿ ಮೂವರು ಮತ್ತೊಂದು ಬೈಕ್ನಲ್ಲಿ ಇಬ್ಬರು ಪ್ರಯಾಣಿಸುತ್ತಿರುವಾಗ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಹರದಗಟ್ಟಿ ಗ್ರಾಮದ ಆನಂದ ಲಮಾಣಿ, ರೇಖಾ ಲಮಾಣಿ, ಕಾವೇರಿ ಎಂಬ ಮೂವರು ಮತ್ತು ಅಮರಾಪುರ ಗ್ರಾಮದ ಪರಶು ಬ್ಯಾಳಿ, ರಮೇಶ ಕುರಿ ಎಂಬವರು ಗಾಯಗೊಂಡಿದ್ದಾರೆ.