ಬೆಂಗಳೂರು : ಪ್ರತಿದಿನ ನಮಗೆ 18 ರಿಂದ 20 KL ಆಕ್ಸಿಜನ್ ಒದಗಿಸದೇ ಹೋದರೆ ಗದಗ ಜಿಮ್ಸ್‌ನಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ ಅಷ್ಟೇ ಏಕೆ, ಆಕ್ಸಿಜನ್, ಬೆಡ್ ಸಿಗದೇ ಆಸ್ಪತ್ರೆ ಆವರಣದಲ್ಲ ಸೋಂಕಿತರು ಸಾವನ್ನಪ್ಪಬೇಕಾಗಿದೀತು ಎಂಬ ಮುನ್ನೆಚ್ಚರಿಕೆಯಿಂದ ಜಾಗೃತರಾಗಿ. ದಯವಿಟ್ಟು ಅಗತ್ಯ ಪೂರೈಕೆಗೆ ತುರ್ತಾಗಿ ವ್ಯವಸ್ಥೆ ಮಾಡಿಸಿ ಎಂದು ಆಗ್ರಹಿಸಿ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಅವರು ಗದಗ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್‌ಗೆ ಪತ್ರ ಬರೆದಿದ್ದಾರೆ.
ಮೇ 3ರಂದು ನಡೆದ ಸಭೆಯಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಚರ್ಚಿಸಿದ್ದೇವೆ. ನಾನು 12 ಸಲಹೆ ಮಾಡಿದ್ದರ ಬಗ್ಗೆ ತಮಗೆ ನೆನಪಿದೆ ಎಂದು ಭಾವಿಸುವೆ. ಅವುಗಳಲ್ಲಿ ಯಾವುಗಳಾಗಿವೆ?, ಯಾವುವು ಆಗಿಲ್ಲ? ತಾವು ಪರಿಶೀಲನೆ ಮಾಡದಿದ್ದರೆ ತೀವ್ರ ನೋವು ನಿಶ್ಚಿತ. ನೀಡಿದ ಸಲಹೆಗಳು ಗದಗ ಜಿಲ್ಲೆಯ ಜನರ ರಕ್ಷಣೆಗಾಗಿ ನೀಡಿದ ಸಲಹೆಗಳಾಗಿವೆ ಎಂದು ತಿಳಿಸಿದ್ದಾರೆ.
ಸರ್ಕಾರದಿಂದ ವೆಂಟಿಲೇಟರ್ ತರಿಸುವುದರಲ್ಲಿ ನಾನು ವೆಂಟಿಲೇಟರಗಳಿಗೆ ಕನೆಕ್ಟರ್‌ಗಳಿಲ್ಲ ಎಂದು ಕಳೆದ ಆರು ದಿನಗಳಿಂದ ಅಲ್ಲಿಯೇ 25 ವೆಂಟಿಲೇಟರ್ ಖಾಲಿ ಕುಳಿತಿವೆ. ವೆಂಟಿಲೇಟರ್ ಇಲ್ಲದೇ ಹತ್ತಾರು ನಮ್ಮ ಜನ ಸಾವನ್ನಪ್ಪಿದರು.
ಆದರೆ, ಬಂದ ಆಕ್ಸಿಜನ್ ವಿಷಯವಂತೂ ಬಾರಿ ಗೊಂದಲಮಯ. ಜಿಲ್ಲೆಗೆ ಎಷ್ಟು ಆಕ್ಸಿಜನ್ ಬೇಕೋ ಅಷ್ಟು ಪ್ರಮಾಣ ತರಲು ಗಂಭೀರ ಪ್ರಯತ್ನವಾಗಲಿ. ಸರ್ಕಾರದ ಆಕ್ಸಿಜನ್ ಹಂಚಿಕೆಯಲ್ಲಿ ಗದಗ ಜಿಲ್ಲೆಯನ್ನು ಕಡೆಗಣಿಸಿದ್ದಾರೆ.
70 ಕಿ.ಮೀ. ದೂರದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವಿದ್ದರೂ ನಮಗೆ ಬೇಕಾದ ಕೇವಲ 15 ರಿಂದ 20 KL ಆಕ್ಸಿಜನ್ ದೊರೆಯುತ್ತಿಲ್ಲ. ಏನಿದರ ಅರ್ಥ? ಎಂದು ಪ್ರಶ್ನಿಸಿದ್ದಾರೆ.
ಪ್ರತಿದಿನ ಆಕ್ಸಿಜನ್ ಕೊರತೆಯಿಂದ ಹಾಗೂ ಸೂಕ್ತ ಸಮಯಕ್ಕೆ ಬೆಡ್ ಸಿಗದೇ ಇರುವ ಕಾರಣ ಪ್ರತಿ ದಿನ ಹತ್ತಾರು ಜನ ಸಾವನ್ನಪ್ಪುತ್ತಿದ್ದಾರೆ. ಜಿಲ್ಲಾಡಳಿತ ಆಕ್ಸಿಜನ್ ಇಷ್ಟೇ ಪ್ರಮಾಣದಲ್ಲಿ ಉಪಯೋಗಿಸಬೇಕು. ಹೆಚ್ಚಿನ ಆಕ್ಸಿಜನ್ ಇಲ್ಲ ಎಂದು ಹೇಳುವ ಸ್ಥಿತಿಗೆ ಬಂದಿದೆ ಎಂದು ಸಚಿವರ ಗಮನ ಸೆಳೆದಿದ್ದಾರೆ.