ಗದಗ/ಬೆಂಗಳೂರು: ಗಜೇಂದ್ರಗಡ ತಾಲೂಕಿನ ಹಾಲಕೆರೆ ಶ್ರೀಅನ್ನದಾನೇಶ್ವರ ಸಂಸ್ಥಾನಮಠದ ಕಾಯಕಯೋಗಿ, ತ್ರಿವಿಧ ದಾಸೋಹಿ ಅಭಿನವ ಅನ್ನದಾನೇಶ್ವರ ಡಾ.ಸಂಗನಬಸವ ಸ್ವಾಮೀಜಿಯವರು ಇಂದು ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ.
85 ವರ್ಷದ ಸ್ವಾಮೀಜಿಗಳು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಇಂದು ಬೆಳಗ್ಗೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಾನಗಲ್ ಶಿವಯೋಗಿ ಮಂದಿರದ ಅಧ್ಯಕ್ಷರಾಗಿದ್ದ ಶ್ರೀ ಉತ್ತರ ಕರ್ನಾಟಕ ಭಾಗದ ಬಡ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹದ ಮೂಲಕ ಬೆಳಕಾಗಿ ಶ್ರೀಗಳು ಶ್ರೀಮಠದಲ್ಲಿ ಇತ್ತೀಚೆಗೆ ನಡೆದ ನ.8, 9 ಮತ್ತು 10 ರಂದು ಮೂರು ದಿನಗಳ ಕಾಲ ಅನ್ನದಾನೇಶ್ವರ ಶ್ರೀಗಳ ಗುರುವಂದನಾ ಹಾಗೂ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅವರ ಚರಪಟ್ಟಾಧಿಕಾರ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ಹಾಲಕೆರೆಯ ಡಾ.ಅಭಿನವ ಅನ್ನದಾನ ಸ್ವಾಮೀಜಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ನರೇಗಲ್ ಪಟ್ಟಣದ ವರ್ತಕರ ಸಂಘದಿಂದ ಸೋಮವಾರ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡುವ ಮೂಲಕ ಗೌರವ ಸೂಚಿಸುತ್ತಿದ್ದಾರೆ.
ಅಂತಿಮ ಸಂಸ್ಕಾರ
ನಾಳೆ ಮಧ್ಯಾಹ್ನ 3 ಗಂಟೆಗೆ ಅವರ ಇಚ್ಛೆಯಂತೆ ಹಾಳಕೆರೆಯಲ್ಲಿಯೇ ಸಮಾಧಿ ಮಾಡಲಾಗುವುದು. ದೇವರು ಪೂಜ್ಯರ ಆತ್ಮಕ್ಕೆ ಶಾಂತಿ ಕೊಡಲಿ ಹಾಗೂ ದುಃಖ ಭರಿಸುವ ಶಕ್ತಿಯನ್ನು ನಾಡಿನ ಎಲ್ಲ ಭಕ್ತ ವೃಂದಕ್ಕೆ ನೀಡಲಿ ಎಂದು ಹಾಲಕೆರೆ ಮಠದ ನೂತನ ಪೀಠಾಧ್ಯಕ್ಷರಾದ ಮುಪ್ಪಿನ ಬಸವಲಿಂಗ ನಿರಂಜನ ಮಹಾ ಸ್ವಾಮೀಜಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀಗಳು ನಡೆದು ಬಂದ ಹಾದಿ
ಶ್ರೀಮದ್ ವೀರಶೈವ ಶಿವಯೋಗಿ ಮಂದಿರ ಅಧ್ಯಕ್ಷರಾದ ಶ್ರೀಗಳು ತಮ್ಮ ಜೀವನದದುದ್ದಕ್ಕೂ ಬಸವ ತತ್ವಗಳನ್ನು ಅನುಷ್ಠಾನಕ್ಕೆ ತರಲು ಆಹರ್ನಿಶಿ ಶ್ರಮಿಸಿದರು. ಅವರು ಮಾಡಿದ ಸೇವೆ ಕೆಲಸ ಕಾರ್ಯಗಳು ಅವಿಸ್ವಮರಾನಿಯ ಪ್ರತಿಷ್ಠಿತ ಬಾಗಲಕೋಟೆಯ ಬಸವೇಶ್ವರ ವಿದ್ಯಾ ವರ್ಧಕ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವರು ಬಳ್ಳಾರಿ ಹೊಸಪೇಟೆಯ ಕೊಟ್ಟೂರೇಶ್ವರ ಸಂಸ್ಥಾನ ಮಠದ ಅಧಿಪತಿಗಳಾಗಿದ್ದರು.
ಹಾಗೂ ಗದಗ ಜಿಲ್ಲೆಯ ಹಾಳಕೇರಿ ಅನ್ನದಾನೇಶ್ವರ ಸಂಸ್ಥಾನ ಮಠದ ಅಧಿಪತಿಗಳಾಗಿದ್ದರು. ತ್ರಿಕಾಲ ಪೂಜಾನಿಷ್ಠರು ಕಾಯಕ ಹಾಗೂ ದಾಸೋಹ ಯೋಗಿಗಳು, ಸರ್ವ ಧರ್ಮ ಸಮನ್ವಯ ಸಾಧನೆಗೆ ಹರಿಜನ - ಗಿರಿಜನ ಬಂಧುಗಳ ಮನೆಗೆ ಪಾದಯಾತ್ರೆ ಮಾಡಿದ ಹಾಗೂ ಸಾವಯವ ಕೃಷಿ ಮತ್ತು ಜೈವಿಕ ಇಂಧನ ಬಳಕೆಗೆ ಉತ್ತೇಜನ ನೀಡಲು ಚಕ್ಕಡಿ ಮೂಲಕ ಉಳವಿ ವರೆಗೆ ಯಾತ್ರೆ ಮಾಡಿದ್ದರು.
ಶ್ರೀಗಳ ದರ್ಶನ ಪಡೆದ ಸಿಎಂ, ಮಾಜಿ ಸಿಎಂ


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಪುಟ ಸಹೋದ್ಯೋಗಿಗಳು ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರು ಅಪೋಲೋ ಆಸ್ಪತ್ರೆಯಲ್ಲಿ ಶ್ರೀಗಳ ಅಂತಿಮ ದರ್ಶನ ಪಡೆದರು
ಕಾಂಗ್ರೆಸ್ ನಾಯಕರ ಸಂತಾಪ
ಡಾ. ಅಭಿನವ ಸಂಗನಬಸವ ಮಹಾಸ್ವಾಮಿಗಳ ನಿಧನಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಶ್ರೀಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕೊಡುಗೆಗಳನ್ನು ಸ್ಮರಿಸಿದ್ದಾರೆ.
ಹಂಪಿ ಹೇಮಕೂಠ, ಬಳ್ಳಾರಿ ಮತ್ತು ಹಾಲಕೆರೆಮಠ, ಬಾದಾಮಿ ಶಿವಯೋಗ ಮಂದಿರದ ಅಧ್ಯಕ್ಷರು, ಜಗದ್ಗುರುಗಳು ಆದ ಡಾ. ಅಭಿನವ ಸಂಗನಬಸವ ಮಹಾಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಮಠದ ಅನುಯಾಯಿಗಳಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಶ್ರೀಗಳು ವಿವಿಧ ರಂಗಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಸಾಮಾಜಿಕ, ಶೈಕ್ಷಣಿಕ ಸುಧಾರಣೆಗಾಗಿ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದರು. ನಾಡಿನ ಬಡವರು, ಸೌಲಭ್ಯ ವಂಚಿತ ಜನರ ಬಗೆಗೆ ಅಪಾರ ಕಾಳಜಿ ಹೊಂದಿದ್ದ ಶ್ರೀಗಳು ಅವರ ಕಲ್ಯಾಣಕ್ಕಾಗಿ ದೀರ್ಘಕಾಲದಿಂದ ಶ್ರಮಿಸುತ್ತಾ ಬಂದಿದ್ದರು. ಅವರ ಹಠಾತ್ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಚಿವರು, ಶಾಸಕರೂ ಸೇರಿದಂತೆ ಹಲವು ನಾಯಕರು ಅಗಲಿದ ಅಭಿನವ ಸಂಗನಬಸವ ಶ್ರೀಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.