ಗದಗ: ಜಗತ್ತು ಇಷ್ಟೆಲ್ಲಾ ಮುಂದುವರೆದಿದ್ದರೂ ಇನ್ನೂ ಕಿತ್ತು ತಿನ್ನುವ ಬಡತನ ಜೀವಂತವಾಗಿದೆ. ಪ್ರತಿಭೆ ಹಾಗೂ ಅರ್ಹತೆ ಇದ್ರೂ ಬಡತನದ ಕೆಟ್ಟ ಕಣ್ಣು ಆ ಪ್ರತಿಭೆಯನ್ನು ಬೆಳೆಯಲು ಬಿಡುತ್ತಿಲ್ಲ. ಇದಕ್ಕೆ ಪುಷ್ಠಿ ನೀಡುವಂತಹ ಮನಕಲುಕುವ ಘಟನೆಯೊಂದು ಗದಗ ನಗರದಲ್ಲಿ ಬೆಳಕಿಗೆ ಬಂದಿದೆ.
ನಗರದ ಸಾಯಿ ಬಾಬಾ ಮಂದಿರದ ಪಕ್ಕದಲ್ಲಿರುವ ಗುಡಿಸಲಿನಲ್ಲಿನ ವಿದ್ಯಾರ್ಥಿಯೋರ್ವ ಬೀದಿ ದೀಪದ ಕೆಳಗೆ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ತಮ್ಮ ಗುಡಿಸಲಿನಲ್ಲಿ ವಿದ್ಯುತ್ ದೀಪ ಇಲ್ಲದಿರುವುದರಿಂದ ರಾತ್ರಿಯಾದ್ರೆ ಸಾಕು ಪ್ರತಿ ದಿನ ಅಭ್ಯಾಸಕ್ಕಾಗಿ ಪಕ್ಕದ ಬೀದಿ ದೀಪದ ಮೊರೆ ಹೋಗ್ತಾನೆ.
ಈ ವಿದ್ಯಾರ್ಥಿ ಹೆಸರು ಸಿಂಹಾದ್ರಿ ಗೊಲ್ಲರ. ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಈತ ಸಾಯಿರತ್ನಾ ಶಾಲೆ ವಿದ್ಯಾರ್ಥಿ. ಈ ಬಾಲಕ ವಿಶೇಷ ಚೇತನನಾಗಿದ್ದು, ಇವರ ತಂದೆ-ತಾಯಿ ಇಬ್ಬರೂ ಕೂಲಿ-ನಾಲಿ ಮಾಡಿಕೊಂಡು ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಗದಗ ನಗರದಲ್ಲಿ ಯಾವುದೇ ಸೂರು ಇಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡ ಯಾವ ಆಸರೆ ಮನೆಯನ್ನೂ ಸಹ ನೀಡಿಲ್ಲ. ಈ ಬಡ ದಂಪತಿ ತಮ್ಮ ಮೂವರು ಮಕ್ಕಳಲ್ಲಿ ಇಬ್ಬರನ್ನು ಮುಂಡರಗಿ ಹಾಸ್ಟೆಲ್ಗೆ ಸೇರಿಸಿದ್ದಾರೆ. ಈ ಬಾಲಕನನ್ನೂ ಹಾಸ್ಟೆಲ್ಗೆ ಸೇರಿಸಬೇಕೆಂಬುದು ಪೋಷಕರ ಆಸೆ. ಆದ್ರೆ ಲಾಕ್ಡೌನ್ ಆಗಿ ಸದ್ಯ ಸಿಂಹಾದ್ರಿ ಮನೆಯಲ್ಲೇ ಓದುವಂತಾಗಿದೆ.
ಈ ಬಾಲಕನ ಜೊತೆಗೆ ಉಳಿದ ಗುಡಿಸಲಿನಲ್ಲಿರುವ ಬೇರೆ ಮಕ್ಕಳು ಸಹ ಬೀದಿ ದೀಪದ ಕೆಳಗೆ ಓದುತ್ತಾರೆ. ಬಾಲಕ ಸಿಂಹಾದ್ರಿಗೆ ಚೆನ್ನಾಗಿ ಓದಿ ನೌಕರಿ ಪಡೆಯೋ ಆಸೆ. ಹಾಗಾಗಿ ಕಿತ್ತು ತಿನ್ನುವ ಬಡತನದ ಮಧ್ಯೆ ಛಲ ಬಿಡದೆ ಬೀದಿ ದೀಪದ ಕೆಳಗೆ ವಿದ್ಯಾಭ್ಯಾಸ ಮಾಡ್ತಿದ್ದಾನೆ. ನಗರದ ಮಧ್ಯ ಭಾಗದಲ್ಲಿ ನೆಲೆಸಿರೋ ನಾಲ್ಕೈದು ಗುಡಿಸಲಿನ ಕುಟುಂಬಗಳಿಗೆ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ಹಾಗಾಗಿ ಗುಡಿಸಲಿನಲ್ಲಿ ವಿದ್ಯುತ್ ದೀಪ ಇಲ್ಲದಿರುವುದಕ್ಕೆ ಮಕ್ಕಳು ಬೀದಿ ದೀಪದ ಕೆಳಗೆ ಅಭ್ಯಾಸ ಮಾಡುತ್ತಿದ್ದಾರೆ. ವರ್ಷ ಪೂರ್ತಿ ಇದೇ ಬೀದಿ ದೀಪದ ಕೆಳಗೆ ಓದುತ್ತಿರೋ ಮಕ್ಕಳ ಉತ್ಸಾಹ ಹಾಗೂ ಛಲಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕುಟುಂಬಕ್ಕೆ ಯಾವುದೇ ಸೌಲಭ್ಯ ನೀಡದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆಧುನಿಕ ಭಾರತದಲ್ಲೂ ಕಿತ್ತು ತಿನ್ನುವ ಬಡತನ ಜೀವಂತವಾಗಿದ್ದು, ಬೀದಿ ದೀಪದ ಕೆಳಗೆ ಓದಿ ವ್ಯಾಸಂಗ ಮಾಡಿ ಭಾರತದ ಸಂವಿಧಾನ ರೂಪಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಪಟ್ಟ ಕಷ್ಟಗಳನ್ನು ಈ ಬಾಲಕ ನೆನಪಿಸಿದ್ದಾನೆ.