ಗದಗ/ಹುಬ್ಬಳ್ಳಿ: ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ನಡೆಸಿದ ಅಮಾನವೀಯ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅತಿಥಿ ಶಿಕ್ಷಕಿ ಗೀತಾ ಬಾರಕೇರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದ ಆರೋಪಿ ಮುತ್ತಪ್ಪ ಹಡಗಲಿ, ಶಾಲೆಯ 4ನೇ ತರಗತಿ ವಿದ್ಯಾರ್ಥಿ ಭರತ್ ಮೇಲೆ ಡಿಸೆಂಬರ್ 19 ರಂದು ಬೆಳಗ್ಗೆ ಹಲ್ಲೆ ನಡೆಸಿ, ಒಂದನೇ ಮಹಡಿಯಿಂದ ಕೆಳಗೆ ತಳ್ಳಿದ್ದ. ಬಳಿಕ ಶಿಕ್ಷಕಿ ಗೀತಾ ಬಾರಕೇರ ಅವರ ಮೇಲೂ ಸಲಾಕೆಯಿಂದ ಹಲ್ಲೆ ನಡೆಸಿದ್ದ.
ಚಿಕಿತ್ಸೆ ಫಲಿಸದೇ ಸಾವು: ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಭರತ್ ಮೃತಪಟ್ಟಿದ್ದ. ಅಲ್ಲದೇ ಶಿಕ್ಷಕಿ ಗೀತಾ ಅವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನಿಖರ ಕಾರಣ ಗೊತ್ತಾಗಿಲ್ಲ: ಇತ್ತೀಚಿಗೆ ಶಾಲಾ ಪ್ರವಾಸಕ್ಕೆ ಹೋದಾಗ ಶಾಲೆಯ ಮತ್ತೊಬ್ಬ ಶಿಕ್ಷಕರ ಜೊತೆ ಗೀತಾ ಸಲುಗೆಯಿಂದ ಇದ್ದರು. ಇವರ ಸಲುಗೆಯನ್ನು ಸಹಿಸಿಕೊಳ್ಳಲಾಗದ ಮುತ್ತಪ್ಪ ಹಡಗಲಿ ಹೊಟ್ಟೆಕಿಚ್ಚಿನಿಂದ ಈ ರೀತಿ ಕೃತ್ಯ ಮಾಡಿರುವುದು ಸದ್ಯದ ಮಾಹಿತಿ. ಆದರೆ ಈ ಬಗ್ಗೆ ಇನ್ನೂ ತನಿಖೆ ಮಾಡಲಾಗುತ್ತಿದೆ. ಭರತ್ನ ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಎಸ್ ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದರು.
ತಡೆಯಲು ಬಂದವರ ಮೇಲೂ ಹಲ್ಲೆ: ಏನಾದರೂ ಮಾಡಲೇಬೇಕು ಎಂಬ ಸಿಟ್ಟಿನಲ್ಲಿದ್ದಾಗ ಬಾಲಕ ಭರತ್ ಕಾಣಿಸಿಕೊಂಡಿದ್ದಾನೆ. ಹಾಗಾಗಿ ಆತನ ಮೇಲೆ ಹಲ್ಲೆ ಮಾಡಿ ಕಟ್ಟಡದ ಮೇಲಿನಿಂದ ದೂಕಿದ್ದಾನೆ. ತಡೆಯಲು ಬಂದವರ ಮೇಲೂ ಹಲ್ಲೆಗೈದಿದ್ದಾನೆ. ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಎಸ್ ಪಿ ಶಿವಪ್ರಕಾಶ್ ದೇವರಾಜು ಅವರು ಹೇಳಿದ್ದರು.
ಓದಿ: ನರಗುಂದ ವಿದ್ಯಾರ್ಥಿ ಕೊಲೆ ಪ್ರಕರಣ: ಆರೋಪಿ ಅತಿಥಿ ಶಿಕ್ಷಕ ಅರೆಸ್ಟ್