ಗದಗ: ಕರ್ತವ್ಯದ ವೇಳೆ ಕೊರೊನಾ ವಾರಿಯರ್ ಸಾವನಪ್ಪಿದ ಹಿನ್ನೆಲೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೃತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಸಿಎಂ ಬಿಎಸ್ ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ.
ಮೇ 27ರಂದು 108 ತುರ್ತು ವಾಹನದ ಚಾಲಕ ಉಮೇಶ ಎಂಬುವರು (ಕೊರೊನಾ ವಾರಿಯರ್) ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮೂಲತಃ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಉಮೇಶ್ ಅವರ ಸಾವಿನ ಬಗ್ಗೆ ಈಟಿವಿ ಭಾರತದಲ್ಲಿ 'ಇದೆಂತಾ ವಿಧಿಯಾಟ, ತಾಳಿ ಅಡವಿಟ್ಟು ಗಂಡನ ಶ್ರಾದ್ಧ ಕಾರ್ಯ ಮಾಡಿದ ಕೊರೊನಾ ವಾರಿಯರ್ ಪತ್ನಿ!' ಶೀರ್ಷಿಕೆಯಡಿ ವರದಿ ಪ್ರಸಾರವಾಗಿತ್ತು.
ವರದಿ ಪ್ರಸಾರವಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲ್ ಹೇಳಿಕೆ ನೀಡಿ ಹಾಗೇನಾದರೂ ಕೊರೊನಾ ವಿಮೆ ವ್ಯಾಪ್ತಿಯಲ್ಲಿ ಬರದೇ ಇದ್ರೆ ಸಿಎಂ ಫಂಡ್‌ನಲ್ಲಿ ಪರಿಹಾರ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
ಅಲ್ಲದೇ ಸಿಎಂ ಯಡಿಯೂರಪ್ಪ ಸಹ ಕುಟುಂಬದ ಜೊತೆಗೆ ಮಾತನಾಡಿ ಅವರ ಸಂಪೂರ್ಣ ಮಾಹಿತಿ ತೆಗೆದುಕೊಂಡಿದ್ದರು. ಪರಿಣಾಮ ಇಂದು ಆ ಕುಟುಂಬಕ್ಕೆ ಪರಿಹಾರ ಧನ ಬಿಡುಗಡೆ ಮಾಡಿದ್ದಾರೆ.