ಗದಗ: ಗೋವಾ ಸರ್ಕಾರ ಮತ್ತೆ ಮಹದಾಯಿ ವಿಚಾರವಾಗಿ ಕ್ಯಾತೆ ತೆಗೆದ ಪರಿಣಾಮ ಜಿಲ್ಲೆಯಲ್ಲಿ ಮಹದಾಯಿ ಹೋರಾಟಗಾರರ ಆಕ್ರೋಶದ ಕಟ್ಟೆ ಒಡೆದಿದೆ.
ಮಹದಾಯಿ ವಿಚಾರವಾಗಿ ಕರ್ನಾಟಕ ಸರ್ಕಾರದ ಮೇಲೆ ನ್ಯಾಯಾಂಗ ನಿಂದನೆ ಆರೋಪ ಮಾಡಿ ಸುಪ್ರೀಂಕೋರ್ಟ್ಗೆ ಗೋವಾ ಅರ್ಜಿ ಸಲ್ಲಿಸಿದ್ದರ ಪರಿಣಾಮ ಹೋರಾಟಗಾರರು ಕಿಡಿಕಾರಿದ್ದಾರೆ. ಗೋವಾ ಸಿಎಂ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು ಹಾಸ್ಯಾಸ್ಪದ ಎಂದು ಮಹದಾಯಿ ಹೋರಾಟಗಾರ ಚಂದ್ರು ಚವ್ಹಾಣ್ ವ್ಯಂಗ್ಯವಾಡಿದ್ದಾರೆ.
ಕುಡಿಯುವ ನೀರಿಗೆ ಯಾರ ಅನುಮತಿ ಬೇಕಿಲ್ಲ, ಸಮಸ್ಯೆಯನ್ನು ಜೀವಂತವಾಗಿ ಇಡಬೇಕೆಂದು ಎಂದು ಬಿಜೆಪಿ ಭಾವಿಸಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶ ಮಾಡಿ, ಕರ್ನಾಟಕಕ್ಕೆ ನ್ಯಾಯ ಒದಗಿಸಬೇಕು. ಒಂದು ವೇಳೆ, ಇದೇ ರೀತಿ ರಾಜಕೀಯ ಮುನ್ನೆಲೆಗೆ ಬಂದರೆ ಮತ್ತೆ ಕ್ರಾಂತಿ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ರೈತರು ಎಚ್ಚರಿಕೆ ರವಾನಿಸಿದ್ದಾರೆ.
ಈಗಾಗಲೇ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದರ ಅಧಿಸೂಚನೆ ಹೊರಡಿಸಲು 2020ರ ಫೆಬ್ರವರಿ 2 ರಂದು ಸುಪ್ರೀಂ ಕೋರ್ಟ್ ಆದೇಶ ಸಹ ನೀಡಿತ್ತು. ಫೆ. 27 ಕ್ಕೆ ಕೇಂದ್ರ ಸರ್ಕಾರ ಗೆಜೆಟ್ ಆಧಿಸೂಚನೆ ಹೊರಡಿಸಿ ನೀರು ಬಳಕೆಗೆ ಸಮ್ಮತಿ ನೀಡಿತ್ತು. ಹೀಗಾಗಿ ಮಹದಾಯಿ ನದಿ ತಿರುವು ಯೋಜನೆಗೆ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿತ್ತು.