ಗದಗ : ಗದಗದ ಸಿದ್ಧಲಿಂಗ ನಗರದ ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿರುವ ಕೌನ್ಸೆಲಿಂಗ್ ವೇಳೆ ಶಿಕ್ಷಕರು ಸರ್ಕಾರದ ಕಾನೂನು ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸರ್ಕಾರಿ ನೌಕರಿ ಹೊಂದಿರುವ ದಂಪತಿಗೆ ವರ್ಗಾವಣೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ, ಸೆಮಿ ಕಪಲ್ ಅಂದ್ರೆ ಪತಿ ಅಥವಾ ಪತ್ನಿ ಖಾಸಗಿ ನೌಕರಿ, ಬೇರೆ ಉದ್ಯೋಗದಲ್ಲಿ ಇದ್ದ ಶಿಕ್ಷಕರಿಗೆ ಈಗ ವರ್ಗಾವಣೆಯಲ್ಲಿ ಅನ್ಯಾಯ ಆಗುತ್ತಿದೆ ಅನ್ನೋ ಕೂಗು ಕೇಳಿ ಬರುತ್ತಿದೆ.
10-20 ವರ್ಷಗಳಿಂದ ವರ್ಗಾವಣೆಗಾಗಿ ಶಿಕ್ಷಕರು ಹೋರಾಟ ಮಾಡುತ್ತಿದ್ದರೂ ವರ್ಗಾವಣೆ ಆಗುತ್ತಿಲ್ಲ. ಅದರಲ್ಲೂ ಶಿಕ್ಷಕಿಯರ ಸ್ಥಿತಿ ಹೇಳತೀರದ್ದಾಗಿದೆ. ದೂರದ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕಿಯರು ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಕಿ ಬಿ.ಬಿ ಫಾತೀಮಾ ಸಮಸ್ಯೆ ಕೇಳೋರಿಲ್ಲವೇ?: ಅದರಲ್ಲೂ ಬಿ.ಬಿ ಫಾತೀಮಾ ಅನ್ನೋ ಶಿಕ್ಷಕಿ ಕಥೆ ಮಾತ್ರ ಎಲ್ಲರ ಮನಕಲಕುವಂತಿದೆ. ಅವರು ಅಲ್ಸರಿಟಿ ಕೊಲೈಟಿಸ್ ಅನ್ನೋ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪ್ರತಿ ತಿಂಗಳು ಈ ಕಾಯಿಲೆಗೆ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕು.
ಒಂದು ವೇಳೆ ಕೆಲಸದ ಒತ್ತಡದಲ್ಲಿ ಟ್ರೀಟ್ಮೆಂಟ್ ತೆಗೆದುಕೊಳ್ಳಲು ಆಗದಿದ್ದಲ್ಲಿ ಆ ಕಾಯಿಲೆ ಕ್ಯಾನ್ಸರ್ ಆಗಿ ಪರಿವರ್ತನೆಯಾಗುತ್ತದೆಯಂತೆ. ಇದರಿಂದ ನನಗೆ ವರ್ಗಾವಣೆ ಅಗತ್ಯ ಅಂತ ಶಿಕ್ಷಕಿ ಹೇಳಿಕೊಂಡಿದ್ದಾರೆ.
ಈ ಶಿಕ್ಷಕಿ ಪತಿ ಗದಗ ನಗರದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಹತ್ತು ವರ್ಷಗಳಿಂದ ಶಿಕ್ಷಕಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇದೀಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ಕಳೆದ ನಾಲ್ಕು ವರ್ಷಗಳಿಂದ 'ಎ' ವಲಯಕ್ಕೆ ವರ್ಗಾವಣೆಗಾಗಿ ಹೋರಾಟ ನಡೆಸಿದ್ದಾರೆ. ಆದ್ರೆ, ವರ್ಗಾವಣೆ ಮಾತ್ರ ಕನಸಾಗಿಯೇ ಉಳಿದಿದೆ.
ಸರ್, ನನ್ನ ಆರೋಗ್ಯ ತೀವ್ರ ಅಪಾಯದಲ್ಲಿದೆ. ದಿನ ಕಳೆದಂತೆ ಆರೋಗ್ಯದಲ್ಲಿ ತೀವ್ರ ಏರುಪೇರಾಗುತ್ತಿದೆ ಅಂತಾ ಬೇಡಿಕೊಂಡ್ರೂ ಅಧಿಕಾರಿಗಳು ಮಾತ್ರ ಆಪರೇಷನ್ ಆದರೆ ಮಾತ್ರ ವರ್ಗ ಅಂತಾರೆ. ಆದರೆ, ಆಪರೇಷನ್ ಮಾಡಿಕೊಂಡ್ರೆ ಬದುಕೋದು ಮಾತ್ರ ಎರಡೇ ವರ್ಷ ಅಂತಾ ವೈದ್ಯರು ಹೇಳಿದ್ದಾರೆ, ನಾನೇನು ಮಾಡೋದು ಅಂತಾ ಶಿಕ್ಷಕಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
3-4 ವರ್ಷಗಳಿಂದ ಕೇಳಿಕೊಂಡರೂ ವರ್ಗಾವಣೆಯಿಲ್ಲ: ಇದು ಒಬ್ಬ ಶಿಕ್ಷಕಿ, ಶಿಕ್ಷಕನ ಕಥೆ ಅಲ್ಲ. ರಾಜ್ಯದ ಬಹುತೇಕ ಶಿಕ್ಷಕರ ಕಥೆ ಇದೇ ರಿತಿ ಇದೆ. ನಗರ ಪ್ರದೇಶದಲ್ಲಿ 10-20 ವರ್ಷಗಳಿಂದ ಇದ್ದರೂ ಅವರು ಅಲ್ಲೇ ಇದ್ದಾರೆ.
‘ಆದ್ರೆ, 15-20 ವರ್ಷಗಳಿಂದ ನಾವು ಗ್ರಾಮೀಣ ಪ್ರದೇಶಗಳಲ್ಲೇ ಸೇವೆ ಸಲ್ಲಿಸುತ್ತಿದ್ದೇವೆ. ಆದ್ರೆ, ನಮಗೆ ವರ್ಗಾವಣೆಯಲ್ಲಿ ಅವಕಾಶ ಸಿಗುತ್ತಿಲ್ಲ. 3-4 ವರ್ಷಗಳಿಂದ ವರ್ಗಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಆದ್ರೂ ವರ್ಗಾವಣೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ನಡೆದ ಕೌನ್ಸೆಲಿಂಗ್ನಲ್ಲೂ ಈ ಶಿಕ್ಷಕರಿಗೆ ವರ್ಗಾವಣೆಗೆ ಅವಕಾಶ ಸಿಕ್ಕಿಲ್ಲ. ಕೌನ್ಸೆಲಿಂಗ್ ಬಹಿಷ್ಕಾರ ಮಾಡಿ ಹೊರ ಬಂದಿದ್ದಾರೆ. ಶಿಕ್ಷಕರಿಗೆ ಇಷ್ಟೊಂದು ಅನ್ಯಾಯ ಆಗುತ್ತಿದ್ದರೂ ರಾಜ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳು ಏನು ಮಾಡುತ್ತಿದ್ದಾರೆಂದು ಸಂಘದ ವಿರುದ್ಧವೂ ಶಿಕ್ಷಕಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶಿಕ್ಷಣ ಸಚಿವರ ವಿರುದ್ಧವೂ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸದ್ಯಕ್ಕೆ ಲಾಕ್ಡೌನ್ ಇಲ್ಲ, ಒಮಿಕ್ರೋನ್ ಬಗ್ಗೆ ಆತಂಕ ಬೇಡ.. ಬೆಳಗಾವಿ ಅಧವೇಶನ ನಡೆಯಲಿದೆ.. ಆರ್. ಅಶೋಕ್
ಕೆಲ ಶಿಕ್ಷಕರು ನಕಲಿ ಮೆಡಿಕಲ್ ಸರ್ಟಿಫಿಕೇಟ್ ನೀಡಿ ವರ್ಗಾವಣೆ ಆಗುತ್ತಿದ್ದಾರೆ. ಇದರಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆನ್ನುವ ಆರೋಪವೂ ಕೇಳಿ ಬಂದಿದೆ. ಬೇರೆ ಬೇರೆ ಇಲಾಖೆಗಳಲ್ಲಿ ಮೂರು, ನಾಲ್ಕು ವರ್ಷಕ್ಕೊಮ್ಮೆ ವರ್ಗ ಆಗುತ್ತದೆ. ಆದರೆ, ಶಿಕ್ಷಕರಿಗೆ ಏಕೆ ವರ್ಗಾವಣೆ ಇಲ್ಲ. ಏಕೆ ಈ ಅನ್ಯಾಯ ಎಂದು ಆಕ್ರೋಶ ಹೊರ ಹಾಕಿದ್ದಾರೆ.