ಗದಗ : ಜಿಲ್ಲೆಯಲ್ಲಿ ಕೊರೊನಾ ಸೋಂಕು ಹತೋಟಿಯಲ್ಲಿತ್ತು. ಹೀಗಾಗಿ ನಮ್ಮಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ ಎಂದು ಬಹುತೇಕ ವ್ಯಾಪಾರ ವಹಿವಾಟಿಗೆ ಇದುವರೆಗೂ ಅವಕಾಶ ಕಲ್ಪಿಸಿತ್ತು. ಆದರೆ ಇದೀಗ ಸೋಂಕು ಹೆಚ್ಚಾಗತೊಡಗಿದ್ದು, ಲಾಕ್ಡೌನ್ಗೆ ಹಾದಿ ಮಾಡಿಕೊಟ್ಟಿದೆ.
ಗದಗ ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ ಇಟ್ಟಿದ್ದರಿಂದ ಪಕ್ಕದ ಜಿಲ್ಲೆಯಿಂದಲೂ ಜನರು ಬರತೊಡಗಿದರು. ಈಗ ಗದಗನಲ್ಲಿ ಸೋಂಕಿತರ ಸಂಖ್ಯೆ ಪ್ರತಿದಿನ 500ರ ಗಡಿ ದಾಟುತ್ತಿದೆ. ಅನಿವಾರ್ಯವಾಗಿ ಜಿಲ್ಲಾಡಳಿತ ಕಠಿಣ ಲಾಕ್ಡೌನ್ ಜಾರಿ ಮಾಡಿದ್ದಾರೆ. ಗದಗನಲ್ಲಿ ಇದೇ ತಿಂಗಳು ಮೇ 27ನೇ ತಾರೀಖಿನಿಂದ ಗುರುವಾರದ ಜೂನ್ 1ರವರೆಗೆ ಜಿಲ್ಲಾಡಳಿತ ಕಠಿಣ ಲಾಕ್ಡೌನ್ ಘೋಷಣೆ ಮಾಡಿದೆ.
ಕೆಟ್ಟ ಮೇಲೆ ಬುದ್ದಿ ಬಂತು ಅನ್ನುವ ರೀತಿಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಣೆಯಾಗಿದ್ರೂ, ಗದಗನಲ್ಲಿ ಮಾತ್ರ ಲಾಕ್ ಡೌನ್ ಮಾಡಿರಲಿಲ್ಲ. ಗದಗನಲ್ಲಿ ಬೆಳಿಗ್ಗೆ 10 ಗಂಟೆಯವರೆಗೆ ದಿನಸಿ ವಸ್ತುಗಳ ಖರೀದಿಗೆ ಇನ್ನಿತರ ಸೌಲಭ್ಯಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. 10ಗಂಟೆ ಬಳಿಕವೂ ಅಷ್ಟೇನೂ ವ್ಯತ್ಯಾಸ ಕಾಣುತ್ತಿರಲಿಲ್ಲ, ಬಹುತೇಕ ಜನರ ಓಡಾಟ ಕಾಣುತ್ತಿತ್ತು. ಇದರ ನಡುವೆ ಅಕ್ಕ-ಪಕ್ಕದ ಧಾರವಾಡ, ಕೊಪ್ಪಳ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಯ ಜನರೂ ಸಹ ಅಗತ್ಯ ವಸ್ತುಗಳಿಗಾಗಿ ಗದಗ ಜಿಲ್ಲೆಗೆ ಎಂಟ್ರಿ ಕೊಡೋದಕ್ಕೆ ಶುರು ಮಾಡಿದರು. ಹಾಗಾಗಿ ದಿನ ಕಳೆದಂತೆ ಸೋಂಕಿತರ ಸಂಖ್ಯೆ ಕಡಿಮೆಯಾಗುವ ಬದಲು ಹೆಚ್ಚಾಗ ತೊಡಗಿತು. ಪ್ರತಿ ದಿನ 400-500 ಪಾಸಿಟಿವ್ ಕೇಸ್ ಪತ್ತೆಯಾಗುವುದಕ್ಕೆ ಶುರುವಾದವು. ಇದರಿಂದ ಇದೀಗ ಕಠಿಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ವಿಶ್ವ ಥೈರಾಯ್ಡ್ ದಿನ: ಕೊರೊನಾ ಸಂದರ್ಭದಲ್ಲಿ ನಿರ್ವಹಣೆಗೆ ಇಲ್ಲಿದೆ ಸೂತ್ರ
ಮೇ27 ರ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಜೂನ್ 1ನೇ ತಾರೀಖಿನ ಮಂಗಳವಾರ ಬೆಳಿಗ್ಗೆ 6 ಗಂಟೆಯವರೆಗೆ ಕಠಿಣ ಲಾಕ್ ಡೌನ್ ಮಾಡಿರುವ ಜಿಲ್ಲಾಡಳಿತ ಈ ಅವಧಿಯಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗದಿದ್ದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಿದೆ ಎಂದಿದೆ.ತರಕಾರಿ, ಹಣ್ಣು, ಹೂವು ವ್ಯಾಪಾರಸ್ಥರು ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡಬೇಕು. ಎಲ್ಲ ಬಗೆಯ ಮಾರುಕಟ್ಟೆ ಬಂದ್ ಇರಲಿವೆ. ತಳ್ಳುಗಾಡಿಯವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ವ್ಯಾಪಾರ ಮಾಡಬೇಕು. ಹಾಲು ಮಾರಾಟ ಪ್ರತಿದಿನ ಬೆಳಿಗ್ಗೆ 8 ಗಂಟೆಯವರೆಗೆ ಮಾತ್ರ ಅವಕಾಶವಿದ್ದು, ಕಿರಾಣಿ ಸಾಮಾನುಗಳಿಗೆ ಹೋಂ ಡಿಲೆವರಿಗೆ ಅವಕಾಶ ನೀಡಲಾಗಿದೆ.
ರೈತಾಪಿ ವಸ್ತುಗಳನ್ನು ಖರೀದಿ ಮಾಡಲು ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ ಅವಕಾಶವಿದೆ. ನಗರ ಹಾಗೂ ಹಳ್ಳಿಗಳಲ್ಲಿಯೂ ಸಹ ಎಲ್ಲ ಬಗೆಯ ಹೋಟೆಲ್ಗಳೂ ಬಂದ್ ಇರಲಿವೆ. ಬಾರ್ ಹಾಗೂ ವೈನ್ ಶಾಪ್ ಕೂಡ ಜೂನ್ 1ರವರೆಗೆ ಬಂದ್ ಆಗಲಿವೆ.
ಮಧ್ಯದ ಪಾರ್ಸಲ್ಗೂ ಅವಕಾಶವಿಲ್ಲ. ಮಾಂಸದ ಅಂಗಡಿಗಳು ಬಂದ್ ಇರಲಿದ್ದು, ನಿಯಮ ಬ್ರೇಕ್ ಮಾಡಿದರೆ ಪೊಲೀಸರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.