ಗದಗ: ಜಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗುವ ಮೂಲಕ ಜಿಲ್ಲೆ ಸದ್ಯ ಕೊರೊನಾ ವೈರಸ್‌ನಿಂದ ಮುಕ್ತಿ ಪಡೆದಿದೆ.
ಒಟ್ಟು ಐವರು ಕೊರೊನಾ ಸೋಂಕಿತರ ಪೈಕಿ ಓರ್ವ ವೃದ್ಧೆ ಮೃತಪಟ್ಟಿದ್ದು, ಉಳಿದ ನಾಲ್ವರು ಸೋಂಕಿತರು ಸಂಪೂರ್ಣ ಗುಣಮುಖರಾಗಿ ಗದಗ ಜಿಮ್ಸ್ ಆಸ್ಪತ್ರೆಯಿಂದ ತೆರಳಿದ್ದಾರೆ. ಈ ಮೊದಲು ಓರ್ವ ಮಹಿಳೆ ಡಿಸ್ಚಾರ್ಜ್ ಆಗಿದ್ದರು. ಇವತ್ತು ಮೂವರು ಆಸ್ಪತ್ರೆಯಿಂದ ತೆರಳಿದ್ದಾರೆ. 75 ವರ್ಷದ ವೃದ್ಧ, 45 ವರ್ಷದ ವ್ಯಕ್ತಿ, ಮತ್ತು 26 ವರ್ಷದ ಯುವಕ ಇಂದು ಮನೆಗೆ ಮರಳಿದ್ದಾರೆ.
ಈ ಸಂದರ್ಭ ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್ ಭೂಸರೆಡ್ಡಿ, ವೈದ್ಯರು, ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಬೀಳ್ಕೊಟ್ಟರು. ರೇಷನ್ ಕಿಟ್, ಮಾಸ್ಕ್, ಸ್ಯಾನಿಟೈಸರ್ ನೀಡಿ ಆ್ಯಂಬುಲೆನ್ಸ್ ಮೂಲಕ ಮನೆಗೆ ತಲುಪಿಸಲಾಯಿತು.
ಈಟಿವಿ ಜೊತೆಗೆ ಮಾತನಾಡಿದ ಜಿಮ್ಸ್ ನಿರ್ದೇಶಕ ಪಿ.ಎಸ್. ಭೂಸರೆಡ್ಡಿ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ನಮ್ಮ ವೈದ್ಯರು ಹಗಲಿರುಳು ಕೆಲಸ ಮಾಡಿದ್ದಾರೆ. ಹೀಗಾಗಿ ಎಲ್ಲರಿಗೂ ಅಭಿನಂದಿಸುತ್ತೇನೆ. ವೈದ್ಯರ ಶ್ರಮದ ಪ್ರತಿಫಲವಾಗಿ ಎಲ್ಲಾ ರೋಗಿಗಳು ಬಿಡುಗಡೆಯಾಗಿದ್ದು ವೈಯಕ್ತಿಕವಾಗಿ ನನಗೆ ಮತ್ತು ನಮ್ಮ ಸಿಬ್ಬಂದಿಗೆ ಸಂತಸ ತಂದಿದೆ ಎಂದರು.