ಗದಗ: ಲಾಕ್ಡೌನ್ ತೆರವಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸದೆ ಇರುವ ಬೈಕ್ ಸವಾರರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಕಳೆದೆರಡು ದಿನಗಳಿಂದ ಹೆಲ್ಮೆಟ್ ಧರಿಸಲೇಬೇಕು ಅಂತಾ ಗಲ್ಲಿ ಗಲ್ಲಿಗಳಲ್ಲಿ ನಿಂತು ಖಡಕ್ ಎಚ್ಚರಿಕೆ ನೀಡುತ್ತಿದ್ದಾರೆ.
ನೂತನ ಮೋಟಾರು ವಾಹನ ಕಾಯ್ದೆಯನ್ವಯ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದರು. ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ತಡೆದು ದಂಡ ವಿಧಿಸುತ್ತಿದ್ದ ದೃಶ್ಯಗಳು ಅವಳಿ ನಗರದಲ್ಲಿ ಸಾಮಾನ್ಯವಾಗಿತ್ತು. ಮೊನ್ನೆ ಒಂದೇ ದಿನ 207 ಪ್ರಕರಣಗಳನ್ನು ದಾಖಲಿಸಿ, 1,03,500 ರೂ. ದಂಡ ವಸೂಲಿ ಮಾಡಿದ್ದು, ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಗದಗ ಎಸ್‌ಪಿ ಯತೀಶ್ ಎನ್. ಮಾತನಾಡಿ, ಒಂದು ವಾರದಿಂದ ಸವಾರರಿಗೆ ತಿಳುವಳಿಕೆ ನೀಡಿದ್ದೇವೆ. ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಅಂತಾ ಪ್ರಚಾರ ಮಾಡಿದ್ದೇವೆ. ದಿಢೀರ್ ದಂಡ ಹಾಕಿಲ್ಲ. ಜನರ ಪ್ರಾಣ ಮುಖ್ಯ. ಅವರಿಗೆ ದಂಡ ಹಾಕುವುದು ಮುಖ್ಯವಲ್ಲ. ಅದ್ರೆ ದಂಡದ ಭಯದಿಂದಾದರೂ ಹೆಲ್ಮೆಟ್ ಧರಿಸಿ ಸಂಚರಿಸಲಿ ಅನ್ನೋದೆ ನಮ್ಮ ಉದ್ದೇಶವೆಂದು ತಿಳಿಸಿದರು.
ಬೆಟಗೇರಿ ಹೊರವಲಯ, ಭೀಷ್ಮ ಕೆರೆ ಪಕ್ಕ, ಕಿತ್ತೂರು ಚೆನ್ನಮ್ಮ ಉದ್ಯಾನವನ, ಸ್ಟೇಷನ್ ರಸ್ತೆ ಸೇರಿದಂತೆ ಅವಳಿ ನಗರದ ಹಲವೆಡೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ಹೆಲ್ಮೆಟ್, ವಾಹನ ಚಾಲನಾ ಪರವಾನಗಿ, ವಿಮೆ ಸಹಿತ ಅಗತ್ಯ ದಾಖಲೆ ಇಲ್ಲದ ವಾಹನ ಸವಾರರಿಗೆ ದಂಡ ವಿಧಿಸಿದರು.