ಗದಗ: ಮಗಳು ಯಾವಾಗ ಬರ್ತಾಳೆ ಅಂತ ತಾಯಿ ಕಾಯ್ತಿದ್ರೆ, ಅಕ್ಕ ಮನೆಗೆ ವಾಪಸ್ ಬಂದು ಬಿಡು, ನನಗೆ ರಾಖಿ ಕಟ್ಟು ಅಂತ ತಮ್ಮ ಗೋಳಾಡ್ತಿದ್ದಾನೆ. ಇತ್ತ ತಂದೆಯೂ ಕೂಡ ಒಳಗೊಳಗೆ ಕೊರಗುತ್ತಾ ಜೀವನ ದೂಡ್ತಿದ್ದಾರೆ. ಬಾಳಪ್ಪ ನರಗುಂದ ಎಂಬುವರು ತಮ್ಮ ಅಕ್ಕನಿಗಾಗಿ 2 ದಶಕಗಳಿಂದ ಕಾಯ್ತಿರೋ ವ್ಯಕ್ತಿ.
ಬಾಳಪ್ಪ ಅವರ ತಂದೆ ದ್ಯಾಮಪ್ಪ ಅವರು ಗದಗ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಯಾಗಿದ್ರು. ಇವರು ಬೆಟಗೇರಿ ಪೊಲೀಸ್ ಕ್ವಾಟ್ರಸ್ ನಲ್ಲಿ ಉಳಿದುಕೊಂಡಿದ್ದಾಗ, ಇವರ ಅಕ್ಕ ಚಂದ್ರಕಲಾ ಪದವಿ ವ್ಯಾಸಂಗ ಮಾಡುತ್ತಿದ್ದರು. ಬಾಳಪ್ಪ ಅವರು ಹೈಸ್ಕೂಲ್ಗೆ ಹೋಗ್ತಿದ್ರು.ಆ ವೇಳೆ ಚಂದ್ರಕಲಾ ಅವರು ಪ್ರೀತಿ ಬಲೆಗೆ ಬೀಳ್ತಾರೆ. ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹವಾಗಿ ಮನೆಬಿಟ್ಟು ಹೋದವರು ಇಂದಿಗೂ ವಾಪಸ್ ಬಂದಿಲ್ಲ. ಅವತ್ತಿನಿಂದ ಇವತ್ತಿನವರೆಗೂ ಬಾಳಪ್ಪ ಅವರು ತಮ್ಮ ಅಕ್ಕನಿಗಾಗಿ ಕಾಯ್ತಿದ್ದಾರೆ. ಅಲ್ಲದೇ ಎಲ್ಲೆಂದರಲ್ಲಿ ಅಲ್ಲಿ ಹುಡುಕಿ ಸುಸ್ತಾಗಿದ್ದಾರೆ.

ಎಲ್ಲೇ ಇದ್ದರೂ ನೀ ಸುಖವಾಗಿರು ಒಂದು ಸಾರಿ ಮನೆಗೆ ಬಂದು ಅಪ್ಪ ಅವ್ವನನ್ನ ಮಾತಾಡಿಸು, ಹಬ್ಬಕ್ಕೆ ಬಂದು ರಾಖಿ ಕಟ್ಟು ಅಂತ ಬಾಳಪ್ಪ ಅವರು ಸಾಮಾಜಿಕ ಜಾಲತಾಣದ ಮೂಲಕ ಅಕ್ಕನಿಗೆ ಕೇಳಿಕೊಳ್ಳುತ್ತಿದ್ದಾರೆ. ಈ ಜೀವ ಇರುವುದರೊಳಗೊಮ್ಮೆ ತಮ್ಮ ಅಂತ ಮಾತಾಡಿಸು ಅಕ್ಕ ಅಂತ ಬಾಳಪ್ಪ ಅವರು ಕಣ್ಣೀರು ಹಾಕ್ತಿದ್ದು, ಅಕ್ಕನಿಗಾಗಿ ಕಾಯುತ್ತಿದ್ದಾರೆ. ಸುದ್ದಿಯನ್ನು ಓದಿದ ನಿಮಗೆ ಎಲ್ಲಿಯಾದರೂ ಚಂದ್ರಕಲಾ ಅವರು ಸಿಕ್ಕರೆ ದಯವಿಟ್ಟು ವಿಷಯ ತಿಳಿಸಿ. ಅಕ್ಕ-ತಮ್ಮನನ್ನು ಒಂದು ಮಾಡುವ ಪವಿತ್ರ ಕೆಲಸ ಮಾಡಿ ಅನ್ನೋದು ನಮ್ಮ ಆಶಯ.