ಗದಗ: ಪರಿಹಾರದ ಹಣ ನೀಡದೇ ಬಾಕಿ ಉಳಿಸಿಕೊಂಡಿದ್ದು ನಗರದ ಎಪಿಎಂಸಿ ಕಚೇರಿಯನ್ನು ಜಪ್ತಿ ಮಾಡಲಾಗಿದೆ.
ಆರ್.ಆರ್ಹೇಮಂತನವರ ಎಂಬುವರಿಗೆ ಎಪಿಎಂಸಿಯು ಸುಮಾರು 16.50 ಲಕ್ಷ ರೂ ಪರಿಹಾರ ಹಣ ಬಾಕಿ ಉಳಿಸಿಕೊಂಡಿತ್ತು. ಈ ಸಂಬಂಧ ಗದಗ ಜಿಲ್ಲಾ ಪ್ರಿನ್ಸಿಪಲ್ ದಿವಾನಿ ಕೋರ್ಟ್ ಕಚೇರಿ ಜಪ್ತಿ ಆದೇಶ ಹೊರಡಿಸಿ ಅಧಿಕಾರಿಗಳಿಗೆ ಚಾಟಿ ಬೀಸಿದೆ. ಹೀಗಾಗಿ ಕಚೇರಿ, ನಾಲ್ಕು ಕಂಪ್ಯೂಟರ್ ಮತ್ತು ಒಂದು ಫಾರ್ಚ್ಯುನರ್ ಕಾರನ್ನು ಜಪ್ತಿ ಮಾಡಲಾಗಿದೆ.
ಸುಮಾರು 40 ವರ್ಷಗಳ ಹಳೆಯ ಪ್ರಕರಣ ಇದಾಗಿದ್ದು, ನಗರದ ಶ್ರೀ ಪಂಡಿತ ಪುಟ್ಟರಾಜರ ಮಠಕ್ಕೆ ಹೊಂದಿಕೊಂಡಿರುವ ಸುಮಾರು 4 ಎಕರೆ 35 ಗುಂಟೆ ಜಾಗವನ್ನು 1982ರಲ್ಲಿ ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಪರಿಹಾರದಲ್ಲಿ ಕೇವಲ ಶೇ.50 ರಷ್ಟು ಹಣ ನೀಡಲಾಗಿತ್ತು. ಉಳಿದ ಹಣ ನೀಡಲು ಅಧಿಕಾರಿಗಳು ಅಂದಿನಿಂದ ಇಂದಿನವರೆಗೂ ವಿನಾಕಾರಣ ವಿಳಂಬ ಮಾಡುತ್ತಲೇ ಬಂದಿದ್ದರು. ಆಗ ಮೂಲ ಜಾಗದ ಮಾಲೀಕರು ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂಕೋರ್ಟ್ ಅಂಗಳದವರೆಗೂ ವ್ಯಾಜ್ಯ ಹೋಗಿ ಬಳಿಕ ಪ್ರಿನ್ಸಿಪಲ್ ಕೋರ್ಟ್ಗೆ ವರ್ಗಾವಣೆಯಾಗಿತ್ತು. ಇದೀಗ ಸಾಮಗ್ರಿ ಜಪ್ತಿ ಮಾಡಿ ಅವರಿಗೆ ಸಲ್ಲಬೇಕಾಗಿರುವ ಬಾಕಿ ಹಣವನ್ನು ನೀಡುವವರೆಗೂ ಜಪ್ತಿಯಾಗಿರೋ ವಸ್ತುಗಳನ್ನು ವಶಕ್ಕೆ ಪಡೆಯಲು ಕೋರ್ಟ್ ಆದೇಶ ಮಾಡಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಲು ಯಾವ ಹಿರಿಯ ಅಧಿಕಾರಿಯೂ ಕಚೇರಿಯಲ್ಲಿ ಇರಲಿಲ್ಲ. ಅಧ್ಯಕ್ಷರಾಗಲಿ, ಕಾರ್ಯದರ್ಶಿಯಾಗಲಿ ಯಾರೊಬ್ಬರೂ ಕಚೇರಿಯತ್ತ ಸುಳಿದಿರಲಿಲ್ಲ, ಕರೆ ಮಾಡಿದರೂ ಕರೆ ಸ್ವಿಕರಿಸಲಿಲ್ಲ.
ಕಚೇರಿಯಲ್ಲಿದ್ದ ಇತರೆ ಸಿಬ್ಬಂದಿ ಕೆಲಸ ಮಾಡಲು ಕಂಪ್ಯೂಟರ್ ಇಲ್ಲದೆ ಪರದಾಡಿದರು. ಕಚೇರಿಯ ವಾಹನವನ್ನೂ ಸಹ ತೆಗೆದುಕೊಂಡು ಹೋಗಿದ್ದರಿಂದ ವಾಹನ ಇಲ್ಲದೆಯೂ ಸಿಬ್ಬಂದಿ ಅಲೆದಾಡುವಂತಾಯ್ತು.