ಗದಗ : ಒಂದು ಮನೆ ಕಟ್ಟಬೇಕು ಅನ್ನೋದು ಬಹುತೇಕರ ಕನಸು. ಆದರೆ ಮನೆ ಕಟ್ಟೋದು ಒಂದು ಕನಸಾದರೆ ಕಟ್ಟಿರುವ ಮನೆಯನ್ನು ಬಹಳ ವರ್ಷಗಳ ಕಾಲ ಉಳಿಸಿಕೊಂಡು ಹೋಗಬೇಕು ಅನ್ನೋದೆ ಒಂದು ಮುಖ್ಯ ವಿಚಾರ. ಬಹುತೇಕ ನಮ್ಮೆಲ್ಲರ ಮನೆ ಅಬ್ಬಬ್ಬಾ ಅಂದರೆ 50 ವರ್ಷದಿಂದ 100 ವರ್ಷ ಬಾಳಿಕೆ ಬರಬಹುದು. ಆದ್ರೆ ಇಲ್ಲಿರುವ ಮನೆಯೊಂದು 200 ವರ್ಷವಾದರೂ ಮುಕ್ಕಾಗದೆ ಇಂಜಿನಿಯರ್ಗಳಿಗೆ ದೊಡ್ಡ ಸವಾಲಾಗಿ ನಿಂತಿದೆ.
ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿರುವ ಮನೋಹರ ವಸ್ತ್ರದ ಇವರ ಮನೆಯನ್ನು ಕಟ್ಟಿ ಸುಮಾರು 200 ವರ್ಷಗಳು ಕಳೆದಿವೆ. ಪುರುಷ ಚೆನ್ನವೀರಯ್ಯ ವಸ್ತ್ರದ ಈ ಮನೆಯ ಮೂಲ ಪುರುಷರಾಗಿದ್ದಾರೆ. ಇದರಲ್ಲಿ ಈಗ ಸದ್ಯ ನಾಲ್ಕನೇ ತಲೆಮಾರಿನ ಜನ ವಾಸ ಮಾಡುತ್ತಿದ್ದು, ಇದುವರೆಗೂ ಮನೆ ಮುಕ್ಕಾಗಿಲ್ಲವಂತೆ.
ಎರಡು ಎಕರೆಯಲ್ಲಿ ನಿರ್ಮಾಣ:
ಸುಮಾರು 2 ಎಕರೆ ವಿಸ್ತೀರ್ಣದಲ್ಲಿ ಮನೆ ನಿರ್ಮಾಣವಾಗಿದ್ದು, ಕೇವಲ ಮಣ್ಣಿನಿಂದ ಗೋಡೆಗಳನ್ನು ನಿರ್ಮಿಸಲಾಗಿದೆ. ಕೇವಲ ಮಣ್ಣಿನಿಂದ ಗೋಡೆಗಳನ್ನು ನಿರ್ಮಿಸಿದ್ದು, ಇಂದಿಗೂ ಗೋಡೆಗಳು ಬಿದ್ದಿಲ್ಲ. ಮರು ದುರಸ್ತಿ ಕಾರ್ಯ ಕೂಡ ಮಾಡಿಲ್ಲ. ಹೇಗೆ ಇತ್ತೋ ಹಾಗೆಯೇ ಇದೆ. ಮನೆಯವರು ಮೊದಲಿನಂತೆ ಉಳಿಸಿಕೊಂಡು ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಈ ಮನೆಯಲ್ಲಿ ಸುಮಾರು 200 ತೊಲೆಗಳಿದ್ದು, 20 ಕೋಣೆಗಳಿವೆ. ಸುಮಾರು 15 ಬಾಗಿಲುಗಳಿದ್ದು, 20 ಅಂಕಣಗಳಿವೆ. ಮನೆಯ ಒಳಗೆ ಕಾಲಿಡುತ್ತಿದ್ದಂತೆ ಅರಮನೆಯಂತೆ ಕಂಗೊಳಿಸುತ್ತದೆ. ಮನೆಗೆ ಬಳಸಲಾದ ಕಟ್ಟಿಗೆ ತೇಗದಿಂದ ಕೂಡಿದ್ದು ಇಂದಿಗೂ ಹುಳು ಹತ್ತಿಲ್ಲ. ಇದರಲ್ಲಿರುವ ಗೋಡೆಗಳು 20 ರಿಂದ 30 ಅಡಿಯಷ್ಟಿವೆ. ಹಾಗಾಗಿ ಬಹಳಷ್ಟು ವರ್ಷಗಳ ಕಾಲ ಬಾಳಿಕೆ ಬಂದಿವೆ ಎನ್ನಲಾಗುತ್ತಿದೆ.
ಅವಿಭಕ್ತ ಕುಟುಂಬ :
ಇವರದ್ದು ಅವಿಭಕ್ತ ಕುಟುಂಬವಾಗಿದ್ದು, ಮನೆಯಲ್ಲಿ 50 ಜನ ವಾಸವಾಗಿದ್ದಾರೆ. ಎಲ್ಲರೂ ಒಟ್ಟಾಗಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಇವರ ಬಳಿ ಸುಮಾರು 100 ಎಕರೆ ಜಮೀನಿದ್ದು, ಸದ್ಯ ಎಲ್ಲರೂ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾರೆ. ಕೆಲವರು ನೌಕರಿ ಅಂತ ಬೇರೆ ಬೇರೆ ಊರುಗಳಲ್ಲಿ ವಾಸ ಮಾಡುತ್ತಿದ್ದು, ಹಬ್ಬ -ಹರಿದಿನ, ಜಾತ್ರೆ ಇದ್ದಂತಹ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಸಂಭ್ರಮಿಸುತ್ತಾರಂತೆ.
ಮನೆಯಲ್ಲಿವೆ ಐದು ಹಳೇ ಒಲೆಗಳು:
ಇನ್ನು ಮನೆಯಲ್ಲಿ ಹಳೆಯ ಕಾಲದ ಐದು ಒಲೆಗಳು ಈಗಲೂ ಇವೆ. ಅದರಲ್ಲಿಯೇ ಇಂದಿಗೂ ಅಡಿಗೆ ಮಾಡ್ತಾರೆ. ಮನೆ ಯಾವಾಗಲೂ ತಂಪಾಗಿರುತ್ತದೆ. ಬೇಸಿಗೆ ಕಾಲಕ್ಕೆ ಹೇಳಿ ಮಾಡಿದಂತಿದೆ ಈ ಮನೆ. ಹೊರಗಿನಿಂದ ಮನೆಯ ಒಳಗೆ ಹೋದ ಕೂಡಲೇ ತಂಪಾದ ಹಿತ ಅನುಭವ ಆಗುತ್ತದೆ. ಇದಕ್ಕೆ ಕಾರಣ ಕಟ್ಟಿಗೆಯಿಂದ ಮತ್ತು ಮೇಲ್ಚಾವಣಿಗೆ ಮಣ್ಣು ಹಾಕಿದ್ದರಿಂದ ಈ ರೀತಿಯ ವಾತಾವರಣ ಇದೆ. ಇನ್ನು ಇಂತಹ ಮನೆಯಲ್ಲಿ ವಾಸ ಮಾಡೋದಕ್ಕೆ ನಾವು ಪುಣ್ಯ ಮಾಡಿದ್ದೀವಿ ಅಂತಾರೆ ಮನೆಯ ಮಾಲೀಕರು.
ಸ್ವಚ್ಛ ಮಾಡೋದು ಕಷ್ಟ, ಆದರೂ ಇಷ್ಟ:
ಇನ್ನು ಇಷ್ಟೊಂದು ವಿಸ್ತಾರವಾದ ಮನೆಯನ್ನು ಸ್ವಚ್ಛ ಮಾಡೋದೆ ಮನೆಯ ಹೆಣ್ಣು ಮಕ್ಕಳಿಗೆ ದೊಡ್ಡ ತಲೆನೋವು. ಆದರೆ ನಾವು ಮನೆಗೆ ಹೊಂದಿಕೊಂಡಿದ್ದೇವೆ. ನಮಗೆ ಮನೆಗೆಲಸ ಮಾಡೋದು ಅಷ್ಟೊಂದು ಕಷ್ಟ ಅನಿಸುವುದಿಲ್ಲ ಎನ್ನುತ್ತಾರೆ ಮನೆಯ ಹೆಣ್ಣು ಮಕ್ಕಳು. ಈಗಿನ ಕಾಲಕ್ಕೆ ಈ ಮನೆ ಸುಮಾರು 5 ರಿಂದ 6 ಕೋಟಿ ರೂ. ಬೆಲೆ ಬಾಳುತ್ತೆ ಎನ್ನಲಾಗುತ್ತಿದೆ.