ಗದಗ: ಜಿಲ್ಲೆಯಲ್ಲಿ ಬೆಳೆವಿಮೆ ತಾರತಮ್ಯ ಮಾಡಲಾಗಿದೆ ಅಂತ ರೈತರು ಆರೋಪಿಸಿದ್ದಾರೆ. ಇಂದು ಗದಗ ಡಿಸಿ ಕಚೇರಿ ಎದುರು ನೆರೆದ ನೂರಾರು ರೈತರು ಜಿಲ್ಲೆಯ ಕೃಷಿ ಅಧಿಕಾರಿಗಳು ರೈತರಿಗೆ ಬೆಳೆನಷ್ಟ ಪರಿಹಾರ ತುಂಬಿಕೊಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಕೆಲವು ಕಡೆ ಶೇ. 70-80 ರಷ್ಟು ಬೆಳೆ ವಿಮೆ ಪರಿಹಾರ ಮಂಜೂರು ಮಾಡಿದರೆ, ಗದಗ ಬೆಟಗೇರಿ ಹೋಬಳಿ ಭಾಗದಲ್ಲಿ ಕೇವಲ ಶೇ. 3 ರಷ್ಟು ಮಾತ್ರ ಬೆಳೆವಿಮೆ ವರದಿ ಸಿದ್ಧಪಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಳೆದ ವರ್ಷ ಅಕಾಲಿಕವಾಗಿ ಸುರಿದ ಧಾರಾಕಾರ ಮಳೆಗೆ ಇಡೀ ಜಿಲ್ಲೆಯ ಈರುಳ್ಳಿ ಬೆಳೆಗಾರರು ನಷ್ಟ ಅನುಭವಿಸಿದ್ದರು. ಫಸಲಿಗೆ ಬಂದಿದ್ದ ಈರುಳ್ಳಿ ಬೆಳೆಯಲ್ಲಿ ಮಳೆ ನೀರು ನಿಂತು ಸಂಪೂರ್ಣವಾಗಿ ಹಾಳಾಗಿ ಹೋಗಿತ್ತು. ಆದರೆ ಸರ್ವೇ ಕಾರ್ಯಕ್ಕೆ ಬಂದಿದ್ದ ಅಧಿಕಾರಿಗಳು ಮಾತ್ರ ನೆಪ ಮಾತ್ರಕ್ಕೆ ಬಂದು ಹೋಗಿದ್ದರು. ಜೊತೆಗೆ ಕಣ್ಣಾರೆ ಕಂಡು ಫೋಟೋ ತೆಗೆಸಿಕೊಂಡು ಹೋಗಿದ್ದರೂ ಸಹ ಕೇವಲ ಈ ಭಾಗದಲ್ಲಿ ಮಾತ್ರ ಶೇ. 3 ರಷ್ಟು ಬೆಳೆ ನಷ್ಟ ಆಗಿದೆ ಅಂತ ವರದಿ ಸಿದ್ಧಪಡಿಸಿ ರೈತರಿಗೆ ಮೋಸ ಎಸಗಿದ್ದಾರೆ ಅಂತ ಆರೋಪಿಸಿದ್ದಾರೆ.
ಹೀಗಾಗಿ, ಬೆಳೆವಿಮೆ ಪರಿಹಾರದಲ್ಲಿ ಆಗಿರುವ ತಾರತಮ್ಯ ಹೋಗಲಾಡಿಸಿ ನಷ್ಟ ಆಗಿರೋ ಹಾನಿಗೆ ಸರಿಯಾದ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಯಾವ ಆಧಾರದ ಮೇಲೆ ಕೇವಲ ಶೇ. 3 ರಷ್ಟು ಬೆಳೆನಷ್ಟ ಆಗಿದೆ ಅಂತ ವರದಿ ಮಾಡಿದರು ಎಂದು ಕೃಷಿ ಜಂಟಿ ನಿರ್ದೇಶಕ ಜಿಯಾ ಉಲ್ಲಾ ಖಾನ್ಗೆ ಬೆವರಿಳಿಸಿದರು. 90 ರಷ್ಟು ಹಾಳಾಗಿರೋ ಬೆಳೆನಷ್ಟವನ್ನು ಕೇವಲ ಕನಿಷ್ಟ ಮಟ್ಟಕ್ಕೆ ವರದಿ ಮಾಡಿದ್ದೇಕೆ? ಎಂಬುದನ್ನು ಸ್ಪಷ್ಟಪಡಿಲು ರೈತರು ಆಗ್ರಹಿಸಿದರು.
ಇದನ್ನೂ ಓದಿ: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ನಾಲ್ಕು ದಿನ ಭಾರಿ ಮಳೆ ಸಾಧ್ಯತೆ