ಗದಗ: ಮಲಪ್ರಭಾ ನದಿ ನಡುಗಡ್ಡೆಯಲ್ಲಿ ಸಿಲುಕಿದ ವೃದ್ಧನೋರ್ವನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಗದಗದಲ್ಲಿ ನಡೆದಿದೆ.
ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ನಿವಾಸಿ ಬಸಪ್ಪ ತಳವಾರ (60) ಎಂಬಾತ ಸ್ನಾನ ಮಾಡಲು ತೆರಳಿದ ವೇಳೆ ಮಲಪ್ರಭಾ ನದಿಯಲ್ಲಿ ತೇಲಿಕೊಂಡು ಹೋಗುತ್ತಿದ್ದ. ಬಳಿಕ ನದಿಯ ನಡುಗಡ್ಡೆಯಲ್ಲಿ ಕುಳಿತು ರಕ್ಷಣೆಗೆ ಸಹಾಯ ಬೇಡುತ್ತಿದ್ದ. ಸುಮಾರು 2 ಗಂಟೆಗಳ ಕಾಲ ನಡುಗಡ್ಡೆಯಲ್ಲಿ ಕುಳಿತಿದ್ದ ವೃದ್ಧನ ರಕ್ಷಣೆಗೆ ಬಾದಾಮಿ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ, ಬೋಟ್ ಮೂಲಕ ರಕ್ಷಿಸಿದ್ದಾರೆ.
ಹಲವು ದಿನಗಳಿಂದ ಶಾಂತವಾಗಿದ್ದ ನದಿ ಈಗ ತುಂಬಿ ಹರಿಯುತ್ತಿದೆ. ನಿನ್ನೆ (ಬುಧವಾರ) ಯಿಂದ ಮಲಪ್ರಭಾ ನದಿಗೆ 5 ಸಾವಿರ ಕ್ಯೂಸೆಕ್ ನೀರಿನ ಹರಿವು ಹೆಚ್ಚಳವಾಗಿದ್ದ ಪರಿಣಾಮ ಮತ್ತೆ ಪ್ರವಾಹ ಭೀತಿ ಎದುರಾಗಿತ್ತು. ಇಂತಹ ಸಮಯದಲ್ಲಿ ಮುನ್ನೆಚ್ಚರಿಕೆಯಿಲ್ಲದೆ, ನದಿಗೆ ಇಳಿದಿರುವುದು ಈ ಅವಘಡಕ್ಕೆ ಕಾರಣವಾಗಿದೆ.