ಗದಗ: ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಬೆಳೆದಿದ್ದ ಮೆಣಸಿನಕಾಯಿಯನ್ನು ರೈತ ನಾಶ ಮಾಡಿರುವ ಘಟನೆ ಜಿಲ್ಲೆಯ ಅಬ್ಬಿಗೇರಿಯಲ್ಲಿ ನಡೆದಿದೆ.
ಅಬ್ಬಿಗೇರಿ ಗ್ರಾಮದ ಬಸವರಾಜ್ ಕಂಬಾರ ಎಂಬ ರೈತ ತನ್ನ ಎರಡು ಎಕರೆ ಜಮೀನಿನಲ್ಲಿ ಮೆಣಸಿನಕಾಯಿಯನ್ನು ಬೆಳೆದಿದ್ದ. ಕೊರೊನಾ, ಲಾಕ್ಡೌನ್ನಿಂದ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮೂಲಕ ಜಮೀನಿನಲ್ಲಿದ್ದ ಬೆಳೆಯನ್ನು ನಾಶ ಮಾಡಿದ್ದಾನೆ. ಅಲ್ಲದೆ ಇದಕ್ಕೆ ಪರ್ಯಾಯವಾಗಿ ದೀರ್ಘ ಕಾಲದ ಬೆಳೆ ಬೆಳೆಯೋಕೆ ಚಿಂತನೆ ನಡೆಸಿದ್ದಾನೆ.
ಈ ಬಾರಿ ಮೆಣಸಿನಕಾಯಿ ಬೆಳೆ ಚೆನ್ನಾಗಿ ಬಂದಿತ್ತು. ಕೈ ತುಂಬಾ ಹಣ ಬರುತ್ತೆ ಎಂದುಕೊಂಡಿದ್ದೆ. ಆದರೆ ಕೊರೊನಾದಿಂದ ಎಲ್ಲಾ ಹಾಳಾಗಿ ಹೋಗಿದೆ. ಸರಿಯಾದ ಮಾರುಕಟ್ಟೆ ಸಿಗದೆ ಅಧಿಕ ನಷ್ಟವಾಗಿದೆ. ನಾವು ಮಾರಾಟ ಮಾಡಲು ಹೋದ್ರೆ ಖರೀದಿಸುವವರಿಲ್ಲ. ಹೀಗಾಗಿ ಜೀವನ ನಡೆಸೋದು ಕಷ್ಟವಾಗಿದೆ ಎಂದು ರೈತ ಬಸವರಾಜ್ ತಮ್ಮ ಅಳಲನ್ನು ತೋಡಿಕೊಂಡಿದ್ದಾನೆ.