ಗದಗ : ಅಕ್ರಮ ಕಲ್ಲು ಗಣಿಗಾರಿಕೆಗೆ ಬಳಸುತ್ತಿದ್ದ ಸ್ಫೋಟಕವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಗದಗನಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮುಂಡರಗಿ ಪೊಲೀಸರು ಸ್ಫೋಟಕ ಹೊತ್ತಿದ್ದ ಲಾರಿ ಮತ್ತು ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
![Explosive material seized in Gadag](https://etvbharatimages.akamaized.net/etvbharat/prod-images/kn-gdg-04-japthi-7203292jpg_13102020191057_1310f_1602596457_452.jpg)
50 ಕೆಜಿ ಇರುವ 135 ಚೀಲದಲ್ಲಿ 6,750 ಕೆಜಿ ಅಮೋನಿಯಂ ನೈಟ್ರೇಟ್ ರಾಸಾಯನಿಕವನ್ನು ತುಂಬಿಕೊಂಡು ತೆರಳುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕನ ಜೊತೆಗೆ ಸ್ಫೋಟಕ ವಸ್ತು ಸಂಗ್ರಹಿಸಿಟ್ಟದ್ದ ಗೋದಾಮು ಮಾಲೀಕನನ್ನು ಸಹ ಪೊಲೀಸರು ಬಂಧಿಸಿದ್ದಾರೆ.
![Explosive material seized in Gadag](https://etvbharatimages.akamaized.net/etvbharat/prod-images/kn-gdg-04-japthi-7203292jpg_13102020191057_1310f_1602596457_311.jpg)
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಬಸವರಾಜ ಅಂಗಡಿ ಅವರಿಗೆ ಸೇರಿದ ಗೋದಾಮಿನಿಂದ ಡಂಬಳ ಗ್ರಾಮದ ಚಾಲಕ ಅಶೋಕ ಕಂಪಿಕಲ್, ಕಲಕೇರಿ ಮಾರ್ಗವಾಗಿ ಸ್ಫೋಟಕದೊಂದಿಗೆ ಹೊರಟಿದ್ದಾಗ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
![Explosive material seized in Gadag](https://etvbharatimages.akamaized.net/etvbharat/prod-images/kn-gdg-04-japthi-7203292jpg_13102020191057_1310f_1602596457_689.jpg)
ಕಪ್ಪತಗುಡ್ಡ ಸಂರಕ್ಷಿತ ವನ್ಯಜೀವಿ ಪ್ರದೇಶ ಎಂದು ಘೋಷಣೆ ಮಾಡಿದ ಬಳಿಕವೂ ಭಾರಿ ಸ್ಫೋಟಕ ಬಳಸಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ದಾಳಿ ನೋಡಿದರೆ ಸಂರಕ್ಷಿತ ವನ್ಯಜೀವಿ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಖಚಿತವೆನಿಸುತ್ತಿದೆ. ಇಂತಹ ಪ್ರಕರಣಗಳು ನಿಲ್ಲಬೇಕೆಂದರೆ ಆರೋಪಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
![Explosive material seized in Gadag](https://etvbharatimages.akamaized.net/etvbharat/prod-images/kn-gdg-04-japthi-7203292jpg_13102020191057_1310f_1602596457_723.jpg)