ಗದಗ: ದಲಿತರು ಹೊಟ್ಟೆ ಪಾಡಿಗಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ ಅಂತಾ ಹೇಳಿಕೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬ ಪ್ರತಿಪಕ್ಷದ ನಾಯಕ ದೀನದಲಿತರ ಬಗ್ಗೆ ಈ ರೀತಿ ಮಾತನಾಡಿದ್ದು ಸರಿಯಲ್ಲ. ದೀನದಲಿತರ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್ ನಾಯಕರಿಗಿಲ್ಲ ಅಂತಾ ಕಿಡಿ ಆಕ್ರೋಶ ವ್ಯಕ್ತಪಡಿಸಿದರು.
'ವಿಧಾನಪರಿಷತ್‌ನ 18 ಸ್ಥಾನಗಳಲ್ಲಿ ಗೆದ್ದೇ ಗೆಲ್ಲುತ್ತೇವೆ':
18 ವಿಧಾನ ಪರಿಷತ್ ಸ್ಥಾನಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಪರಿಷತ್ ಚುನಾವಣೆ ಮುಗಿದ ಮೇಲೆ ವಿಧಾನ ಪರಿಷತ್‌ನಲ್ಲಿ ನಮಗೆ ಬಹುಮತ ಸಿಗುತ್ತೆ. ಹಾಗಾಗಿ ವಿಧಾನ ಪರಿಷತ್‌ನಲ್ಲಿ ಕೆಲಸ ಮಾಡಲು ಅನಕೂಲವಾಗುತ್ತೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡ್ತಾಯಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿ ಮಳೆಯಿಂದ ಅವಾಂತರದ ಬಗ್ಗೆ ಮಾತನಾಡಿ, ಮಳೆ ಅವಾಂತರ ನನಗೆ ಬಹಳ ನೋವು ತಂದಿದೆ. ರೈತರು ಬೆಳೆದ ಎಲ್ಲಾ ಬೆಳೆಗಳು ಬಹುತೇಕ ನಾಶವಾಗುತ್ತಿವೆ. ಹಿಂದಿಗಿಂತಲೂ ಅತಿ ಹೆಚ್ಚು ಬೆಳೆ ನಾಶವಾಗಿದೆ. ನಾನು ನೋಡಿಕೊಂಡು ಬಂದಿದ್ದೇನೆ. ಕೇಂದ್ರದ ವಿಶೇಷ ತಂಡ ಬಂದು ಪರಿಶೀಲನೆ ಮಾಡಿದ್ರೆ ಅನುಕೂಲವಾಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಟ್ ಕಾಯಿನ್ ಹಗರಣದ ಕುರಿತು ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರು ಕ್ರಮವಾಗುತ್ತದೆ. ಬಿಟ್ ಕಾಯಿನ್ ಪ್ರಕರಣ ಕುರಿತು ಮಾಹಿತಿ ಇದ್ದರೆ ನೀಡಿ. ಯಾವುದೇ ಪಕ್ಷದವರು ಇದ್ದರು ಅವರ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಅಂತಾ ಸಿಎಂ ಹೇಳಿದ್ದಾರೆ ಎಂದರು. ಇದೇ ವೇಳೆ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡ ಕೇಂದ್ರದ ನಿರ್ಧಾರಕ್ಕೆ ಸ್ವಾಗತ ಎಂದು ಹೇಳಿದರು.