ಗದಗ: ಜಿಲ್ಲೆಯಲ್ಲಿ ಬರ ವೀಕ್ಷಣೆಗೆ ರಾಜ್ಯ ಸಚಿವರ ತಂಡ ಆಗಮಿಸಿತ್ತು. ಎರಡು ಗಂಟೆ ತಡವಾಗಿ ಆಗಮಿಸಿದ ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಮುಜರಾಯಿ ಇಲಾಖೆ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ ಜಿಲ್ಲೆಯ ಬಿಂಕದಕಟ್ಟಿ ಗ್ರಾಮದ ಮೇವುಬ್ಯಾಂಕ್ ಹಾಗೂ ನರೇಗಾ ಕಾಮಗಾರಿ ವೀಕ್ಷಿಸಿದರು.
ತಡವಾಗಿ ಬಂದಿದ್ದಲ್ಲದೇ ಕೇವಲ ಕಾಟಾಚಾರಕ್ಕೆ ಬರ ವೀಕ್ಷಣೆ ಮಾಡಿದ ಸಚಿವರು ಅವಸರವಸರವಾಗಿ ಹೀಗೆ ಬಂದು ಹಾಗೇ ಹೋದಂತಿತ್ತು.
ಇನ್ನು ಈ ವೇಳೆ ಮಾತನಾಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಚಿಂಚೋಳಿ, ಕುಂದಗೋಳ ಉಪ ಚುನಾವಣೆಯಲ್ಲಿ ಯಾರು ಗೆಲ್ಲಬೇಕು, ಸೋಲಬೇಕು ಎಂದು ಜನ ನಿರ್ಣಯ ಮಾಡ್ತಾರೆ. ನಾ ಹೇಳಿದ್ರೂ ಆಗಲ್ಲ, ಯಡಿಯೂರಪ್ಪ ಹೇಳಿದ್ರೂ ಬದಲಾಗಲ್ಲ. ರಾಜಕಾರಣದಲ್ಲಿ ಯಾರು ಏನು ಮಾತನಾಡಬೇಕು ಅಷ್ಟೇ ಮಾತನಾಡಬೇಕು. ಅವರವರ ಜವಾಬ್ದಾರಿಗೆ ತಕ್ಕಂತೆ ಮಾತನಾಡಿದ್ರೆ ಯಾವ ಸಮಸ್ಯೆ ಆಗಲ್ಲ ಎಂದು ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿಗೆ ಕಿವಿಮಾತು ಹೇಳಿದ್ರು.