ಗದಗ: ಜನವಸತಿ ಪ್ರದೇಶದಲ್ಲಿ ಕೊರೊನಾ ಕ್ವಾರಂಟೈನ್ ಕೇಂದ್ರ ಮಾಡೋದಕ್ಕೆ ಹೊರಟಿದ್ದ ಜಿಲ್ಲಾಡಳಿತದ ಕ್ರಮಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದ ಮುಳಗುಂದ ರಸ್ತೆಯ 33 ನೇ ವಾರ್ಡ್ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಹಾಸ್ಟೆಲ್ಅನ್ನು ಕ್ವಾರಂಟೈನ್ ಕೇಂದ್ರ ಮಾಡಿ ಕೊರೊನಾ ರೋಗಿಗಳನ್ನು ಶಿಫ್ಟ್ ಮಾಡಲು ಹೊರಟಿದ್ದ ಜಿಲ್ಲಾಡಳಿತದ ಕ್ರಮಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಮುಳ್ಳಿನ ಬೇಲಿ ಹಾಕಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಲಾಕ್ ಡೌನ್ಗೆ ನಮ್ಮ ಸಹಕಾರ, ಬೆಂಬಲ ಇದೆ. ಆದ್ರೆ, ಇದು ಜನವಸತಿ ಪ್ರದೇಶವಾಗಿದ್ದು, ಮಕ್ಕಳು, ಮಹಿಳೆಯರು ಓಡಾಡುವ ಸ್ಥಳವಾಗಿದೆ. ಹಾಗಾಗಿ, ಇಲ್ಲಿ ಕ್ವಾರಂಟೈನ್ ಮಾಡುವುದು ಬೇಡ. ನಗರದ ಹೊರವಲಯದಲ್ಲಿ ಸಾಹಿತ್ಯ ಭವನ, ಅಂಜುಮನ್ ಕಾಲೇಜ್, ಹಾಗೂ ಸರ್ಕಾರಿ ಕಟ್ಟಡಗಳು ಇವೆ. ಅಲ್ಲಿ ಕ್ವಾರಂಟೈನ್ ಮಾಡಿದ್ರೆ ಯಾರಿಗೂ ಆತಂಕ ಇರೋದಿಲ್ಲಾ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಊರ ಹೊರಗೆ ವ್ಯವಸ್ಥೆ ಮಾಡುವುದು ಬಿಟ್ಟು ಮಹಾಮಾರಿಯನ್ನು ಊರೊಳಗೆ ತರ್ತೀದ್ದೀರಲ್ಲ ಇದೆಂತ ಕ್ರಮ ಎಂದು ಜನ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಯಾವುದೇ ಕಾರಣಕ್ಕೂ ಇಲ್ಲಿ ಕ್ವಾರಂಟೈನ್ ಮಾಡಲು ಬಿಡುವುದಿಲ್ಲಾ ಎಂದು ಪಟ್ಟು ಹಿಡಿದಿದ್ದಾರೆ.