ಗದಗ : ಹುಬ್ಬಳ್ಳಿಯ ಮೂರು ಸಾವಿರ ಮಠದ 500 ಕೋಟಿ ರೂ. ಆಸ್ತಿ ಬಿಜೆಪಿ ಮುಖಂಡತ್ವದಲ್ಲಿ ಪರಭಾರೆಯಾಗಿದೆ. ಅದಕ್ಕೆ ಓರ್ವ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಸಾಥ್ ನೀಡಿದ್ದಾರೆ ಎಂದು ದಿಂಗಾಲೇಶ್ವರ ಶ್ರೀಗಳು ಆರೋಪಿಸಿದ್ದಾರೆ.
ರಾಮ ಮಂದಿರ ನಿರ್ಮಾಣ ಪ್ರಯುಕ್ತವಾಗಿ ಲಕ್ಷ್ಮೇಶ್ವರದಲ್ಲಿ ನಡೆದ ನಿಧಿ ಸಮರ್ಪಣಾ ಅಭಿಯಾನದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, ಯಾರು ಈ ದೇಶದ ಇತಿಹಾಸ ಸಾರ್ವಜನಿಕ ಮಠ, ಮಂದಿರ, ಆಶ್ರಮಗಳನ್ನು ಉಳಿಸಬೇಕೆಂದು ಹೋಗುತ್ತಾರೋ ಅವರ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ಮಕ್ಕಳಿಗೆ ಅನ್ನ ಹಾಕಿ, ವಿದ್ಯೆ ಕೊಟ್ಟ ಮೂರು ಸಾವಿರ ಮಠದ ಆಸ್ತಿ ನಾಶವಾಗಿದೆ. ನನ್ನ ಬಗ್ಗೆ ಕೆಲವರು ತಪ್ಪು ಕಲ್ಪನೆ ಬಿತ್ತರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಹಿಂದೂ ದೇವಾಸ್ಥಾನ ನಾಶ ಮಾಡಿದ ಮುಸ್ಲಿಂ ದೊರೆಗಳ ಬಗ್ಗೆ ನಾವು ಭಾಷಣ ಮಾಡುತ್ತೇವೆ. ಆದರೆ ಹಿಂದೂಗಳೇ ಎಷ್ಟೋ ದೇವಾಲಯಗಳನ್ನು ನಾಶ ಮಾಡಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕೇವಲ ಪರ ಧರ್ಮಿಯರು ಮಂದಿರ ನಾಶಗೊಳಿಸಿದರಷ್ಟೇ ತಪ್ಪಲ್ಲ, ನಮ್ಮ ಧರ್ಮದವರು ನಾಶಗೊಳಿಸಿದರು ಕೂಡ ಅಷ್ಟೇ ತಪ್ಪು. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಯಾವುದೇ ಸರ್ಕಾರವಾಗಿರಲಿ, ನಮ್ಮ ದೇವಸ್ಥಾನದ ಆಸ್ತಿ ಮುಟ್ಟುವವರ ವಿರುದ್ಧ ಹೋರಾಟ ಆಗಲೇಬೇಕು ಎಂದು ದಿಂಗಾಲೇಶ್ವರ ಶ್ರೀಗಳು ಒತ್ತಾಯಿಸಿದರು.
ಇದನ್ನೂ ಓದಿ: ಮೂರು ಸಾವಿರ ಮಠ ಆಸ್ತಿ ವಿವಾದ; ಹೋರಾಟ ಮುಂದುವರಿಯಲಿದೆ ಎಂದ ದಿಂಗಾಲೇಶ್ವರ ಸ್ವಾಮೀಜಿ