ಗದಗ : ದೇವರ ದರ್ಶನಕ್ಕೂ ಸಹ 'ಟಫ್ ರೂಲ್ಸ್' ಅಡ್ಡಿಯಾಗಿದೆ. ಕಠಿಣ ಕೊರೊನಾ ನಿಯಮಗಳ ಹಿನ್ನೆಲೆ ಗದಗ ನಗರದ ಪ್ರಮುಖ ದೇವಾಲಯಗಳು ಬಂದ್ ಆಗಿದ್ದು, ಪೂಜೆ ವೇಳೆ ಭಕ್ತರು ಕಿಟಕಿಯಿಂದಲೇ ದರ್ಶನ ಪಡೆದರು.
ತ್ರಿಕೂಟೇಶ್ವರ ದೇವಸ್ಥಾನ, ವೀರ ನಾರಾಯಣ ದೇವಸ್ಥಾನ, ರಾಚೋಟೇಶ್ವರ ದೇವಸ್ಥಾನ ಮತ್ತು ಹಾತಲಗೇರಿ ಬಳಿಯ ಶ್ರೀ ಸಾಯಿಬಾಬಾ ದೇವಸ್ಥಾನಗಳ ಬಾಗಿಲು ಬಂದ್ ಆಗಿವೆ. ಅದರಲ್ಲೂ ನಿತ್ಯ ಜನಜಂಗುಳಿಯಿಂದ ಕೂಡಿರುತ್ತಿದ್ದ ನಗರದ ಹಾತಲಗೇರಿ ರಸ್ತೆ ಬಳಿಯ ಸಾಯಿ ಬಾಬಾ ಮಂದಿರವೂ ಕ್ಲೋಸ್ ಆಗಿದೆ. ಹಾಗಾಗಿ ಜನ ಬಾಗಿಲ ಹೊರಗಡೆಯೇ ನಿಂತು ದೇವರ ದರ್ಶನ ಪಡೆದು ನಿರ್ಗಮಿಸುತ್ತಿದ್ದಾರೆ.
ಕೆಲವರು ಕಿಟಕಿಯಿಂದ ಬಾಬಾನ ದರ್ಶನ ಪಡೆದು ತೆರಳುತ್ತಿದ್ದಾರೆ. ಪ್ರಸಾದ ಸೇರಿದಂತೆ ಯಾವುದೇ ವ್ಯವಸ್ಥೆ ಇಲ್ಲ. ಹೊರಡಗೆಯಿಂದಲೇ ದೇವಸ್ಥಾನ ಪ್ರದಕ್ಷಿಣೆ ಹಾಕಿ ಭಕ್ತರು ಮನೆಗೆ ತೆರಳುತ್ತಿದ್ದಾರೆ. ಇನ್ನು ದೇವರಿಗೆ ಕೊರೊನಾ ಓಡಿಸುವ ಶಕ್ತಿಯಿತ್ತು. ದೇವಸ್ಥಾನ ಕ್ಲೋಸ್ ಮಾಡಬಾರದಿತ್ತು ಅಂತ ಕೆಲವು ಮಹಿಳೆಯರು ಅಸಮಾಧಾನ ಹೊರಹಾಕಿದರು.
ಟಫ್ ರೂಲ್ಸ್ ಜಾರಿ ಮಾಡಿದ್ದೂ ನಮ್ಮ ಅನುಕೂಲಕ್ಕೆ. ನಿಯಮ ಪಾಲಿಸಬೇಕಾಗಿರುವುದು ನಮ್ಮ ಕರ್ತವ್ಯ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಟಫ್ ರೂಲ್ಸ್ ಜಾರಿ ಮಾಡಿದ ಸರ್ಕಾರದ ಜೊತೆಗಿದ್ದೇವೆ ಅಂತ ಅರ್ಚಕರು ಹೇಳಿದರು.