ಗದಗ: ಪರಿಸರ ಮತ್ತು ಮುಂದಿನ ಪೀಳಿಗೆಗೆ ನೀರು ಉಳಿಸುವ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸೈಕಲ್ ಮೂಲಕ ದೇಶ ಪರ್ಯಟನೆ ನಡೆಸುತ್ತಿರುವ ರಾಜಸ್ಥಾನದ ನರ್ಪತ್ ಸಿಂಗ್ ಇಂದು (ಶುಕ್ರವಾರ) ಗದಗ ನಗರಕ್ಕೆ ಬಂದಿದ್ದಾನೆ.
ಇವರ ಸೈಕಲ್ ಪಯಣ ಶುರುವಾಗಿದ್ದು, ಜಮ್ಮು ಕಾಶ್ಮೀರದ ವಿಮಾನ ನಿಲ್ದಾಣದಿಂದ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿರುವ ಈತ ಹೋದ ಊರುಗಳಲ್ಲಿ ಒಂದೊಂದು ಗಿಡ ನೆಟ್ಟು ಕಾಡಿನ ಬಗ್ಗೆ ಜತೆಗೆ ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ಆಗುತ್ತಿರುವ ಕೆಟ್ಟ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
32 ಸಾವಿರ ಕಿ.ಮೀ ಕ್ರಮಿಸಿ ಜಾಗೃತಿ ಅಭಿಯಾನ:
ದಿನಕ್ಕೊಂದು ಊರು, ದಿನಕ್ಕೊಂದು ಗಿಡ ಹೀಗೆ ಸುಮಾರು 32 ಸಾವಿರ ಕಿ.ಮೀ ದೇಶದ್ಯಾಂತ ಕ್ರಮಿಸಿ ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ. ಅದರಲ್ಲಿಯೂ ಕೊರೊನಾದಂತಹ ಮಹಾಮಾರಿ ತಡೆಗಟ್ಟಬೇಕಾದರೆ ಕಾಡುಗಳನ್ನ ರಕ್ಷಣೆ ಮಾಡಬೇಕು. ಜತೆಗೆ ಪರಿಸರದ ಮೇಲೆ ಮಾನವನಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಯಾತ್ರೆ ಯಶಸ್ವಿಯಾಗುವಂತೆ ಹಾರೈಕೆ:
ಗದಗ ನಗರಕ್ಕೆ ಬಂದ ನರ್ಪತ್ ಸಿಂಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಆಧರದ ಸ್ವಾಗತ ಕೋರಿದರು. ಗದಗ ಡಿಎಫ್ಒ ದೀಪಿಕಾ ಬಾಜಪೆ ಮತ್ತು ಸಿಬ್ಬಂದಿ ಆತನಿಗೆ ಸನ್ಮಾನ ಮಾಡಿ, ಆತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ನರ್ಪತ್ ಸಿಂಗ್ ಕೈಗೊಂಡಿರುವ ಈ ಜಾಗೃತಿ ಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ನಗರದ ಬಿಂಕದಕಟ್ಟಿಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಗಿಡ ನೆಟ್ಟು, ಪರಿಸರದ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಜತೆ ಸ್ವಲ್ಪ ಹೊತ್ತು ವಿಚಾರ ವಿನಿಮಯ ಮಾಡಿದರು. ಈ ಕುರಿತು ಮಾತನಾಡಿದ ಡಿಎಫ್ಒ ದೀಪಿಕಾ, ನರ್ಪತ್ ಸಿಂಗ್ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನರ್ಪತ್ ಸಿಂಗ್ 2019 ಜನವರಿಯಲ್ಲಿ ತಮ್ಮ ಜಾಗೃತಿ ಅಭಿಯಾನ ಆರಂಭ ಮಾಡಿದ್ದಾರೆ. ವರ್ಷಾನುಗಟ್ಟಲೇ ಊರು, ಕೇರಿ ಬಿಟ್ಟು ಈ ಜಾಗೃತಿಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿರುವುದು ಬಹಳ ಮೆಚ್ಚುಗೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ನರ್ಪತ್ ಸಿಂಗ್ ಜಾಗೃತಿ ಅಭಿಯಾನ ಕಾಶ್ಮೀರದಿಂದ ಆರಂಭವಾಗಿದ್ದು, ಸದ್ಯ ಗದಗ ನಗರಕ್ಕೆ ಬಂದು ತಲುಪಿದೆ. ಮುಂದೆ ಕನ್ಯಾಕುಮಾರಿಯರೆಗೆ ಆತನ ಪ್ರಯಾಣ ಮುಂದುವರಿದು ಬಳಿಕ ಜೈಪುರ್ಗೆ ಹಿಂತಿರುಗಲಿದೆ.
ಇದನ್ನೂ ಓದಿ: ಯುವಕನಿಗೆ 25 ವರ್ಷಗಳಿಂದ ಗೃಹ ಬಂಧನ.. ಹಾಸಿಗೆ ಹಿಡಿದ ತಾಯಿಯ ಕರುಣಾಜನಕ ಕತೆ..