ಗದಗ: ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಬಳಿ ಮಲಪ್ರಭಾ ನದಿಯ ದಡದಲ್ಲಿ ಪತ್ತೆಯಾಗಿದ್ದ ಮೊಸಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ.
ಇಂದು ನದಿ ದಡದಲ್ಲಿ ಮೊಸಳೆ ಕಳೇಬರ ಪತ್ತೆಯಾಗಿದೆ. ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆಯನ್ನು ಹೊರ ತೆಗೆದಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಮಲಪ್ರಭಾ ನದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿ ಹೊಳೆ ಆಲೂರು ಜನರು ಮತ್ತು ಸುತ್ತಲಿನ ಗ್ರಾಮಸ್ಥರಿಗೆ ಆತಂಕ ಮೂಡಿಸಿತ್ತು.
ಹಾಗಾಗಿ ಗ್ರಾಮಸ್ಥರು ಮೊಸಳೆ ಸೆರೆ ಹಿಡಿಯುವಂತೆ ಒತ್ತಾಯ ಮಾಡಿದ್ದರು. ಆದರೆ ಈಗ ಮೂರು ದಿನಗಳ ಬಳಿಕ ಮೊಸಳೆ ಕಳೇಬರ ಪತ್ತೆಯಾಗಿದೆ. ಆದರೆ ಈಗ ಈ ಮೊಸಳೆ ಸಾವಿನ ಸುತ್ತ ಅನುಮಾನ ವ್ಯಕ್ತಪಡಿಸಲಾಗಿದೆ.
ಈಗಾಗಲೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದು, ಮೊಸಳೆಯ ಕಳೇಬರ ಪರೀಕ್ಷೆ ಮಾಡಿದ ನಂತರ ನಿಖರ ಕಾರಣ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.