ಗದಗ : ಒಂದುವರೆ ವರ್ಷದ ಸ್ವಂತ ಮಗಳನ್ನೇ ಕೊಂದು ಪೈಶಾಚಿಕ ಕೃತ್ಯವೆಸಗಿದ್ದ ಪಾಪಿ ಅಪರಾಧಿ ತಂದೆಗೆ ಮರಣ ದಂಡನೆ ಶಿಕ್ಷೆ ನೀಡಿ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ರಾಜಶೇಖರ ವಿ ಪಾಟೀಲರು ಆದೇಶ ಪ್ರಕಟಿಸಿದ್ದಾರೆ.
ರೋಣ ತಾಲೂಕಿನ ಹುಲ್ಲೂರ ಗ್ರಾಮದ ಅಪರಾಧಿ ಪ್ರಶಾಂತಗೌಡ ಪಾಟೀಲನಿಗೆ ಮರಣ ದಂಡನೆ ಶಿಕ್ಷೆ ನೀಡಲಾಗಿದೆ. ಈ ಅಪರಾಧಿ 2012 ರಲ್ಲಿ ಓರ್ವ ಮುಸ್ಲಿಂ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಕೆಲವು ತಿಂಗಳ ನಂತರ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡುತ್ತಾ ಚಿತ್ರಹಿಂಸೆ ನೀಡಿದ್ದ.
ನಿತ್ಯ ಕಿರುಕುಳದಿಂದ ನೊಂದ ಪತ್ನಿ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದಳು. ಆಗ ಒಂದು ಹೆಣ್ಣು ಮಗು ಜನನವಾಗುತ್ತದೆ. ನಂತರ ಪತಿಯನ್ನು ಕರೆದು ತಿಳಿ ಹೇಳಲಾಗಿದೆ. ಈ ಬಳಿಕ ಪತ್ನಿ ಕರೆದುಕೊಂಡು ಚೆನ್ನಾಗಿ ಜೀವನ ಮಾಡುವುದಾಗಿ ಹೇಳಿದ್ದ.
ತಪ್ಪಿನ ಅರಿವಿನ ನಂತರ ರೋಣ ಪಟ್ಟಣದ ಸಿದ್ದಾರೂಢ ಮಠದ ಬಳಿ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಕೆಲವು ತಿಂಗಳ ನಂತರ ಸಾಂತ್ವನ ಕೇಂದ್ರ ಕೇಸ್ ಹಿಂಪಡೆಯುವಂತೆ ಆಗಾಗ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಆಗ ನೊಂದ ಪತ್ನಿ ಮಗುವಿನ ಜೀವನಾಂಶ ಬೇಡಿ ಕೋರ್ಟ್ ಮೊರೆ ಹೋಗಿದ್ದಳು.
ಆಗ ಒಂದೂವರೆ ವರ್ಷದ ಮಗುವನ್ನು ಏಪ್ರಿಲ್ 6, 2015 ರಂದು ಕಿಡ್ನಾಪ್ ಮಾಡಿ, ಗಜೇಂದ್ರಗಡದ ಕಾಲಕಾಲೇಶ್ವರ ಬೆಟ್ಟದಲ್ಲಿ ಕತ್ತುಹಿಸುಕಿ ಕೊಂದು ಸುಟ್ಟುಹಾಕಿ ಸಾಕ್ಷಿಗಳನ್ನು ಸಹ ನಾಶಮಾಡಿ ವಿಕೃತಿ ಮೆರೆದಿದ್ದ.
ಈ ಕುರಿತು ನೊಂದ ಮಹಿಳೆ, ಗಂಡನ ಮೇಲೆ ಅನುಮಾನಗೊಂಡು ರೋಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ರೋಣ ಪೊಲೀಸರು ಪ್ರಕರಣ ಭೇದಿಸಿದ ವೇಳೆ ಅಪರಾಧಿ ಪ್ರಶಾಂತಗೌಡ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕೃತ್ಯವೆಸಗಿರುವುದನ್ನು ಬಾಯಿಬಿಟ್ಟಿದ್ದಾನೆ.
ಈ ಕುರಿತು ರೋಣ ಹಾಗೂ ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಂತರ ಅಪರಾಧ ಪ್ರಕರಣ ಸಾಬೀತಾದ ಹಿನ್ನೆಲೆ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರು ಅಪರಾಧಿಗೆ ಮರಣ ದಂಡನೆ ಶಿಕ್ಷೆ ನೀಡಿದ್ದಾರೆ.