ಗದಗ: ಬೆಟಗೇರಿ ನಗರದ ನಿವಾಸಿ 42 ವರ್ಷದ ಪುರುಷನಲ್ಲಿ (ರೋಗಿ-370) ಸೋಂಕು ದೃಢಪಟ್ಟ ಹಿನ್ನೆಲೆ ನಗರದಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇವರು ರೋಗಿ ಸಂಖ್ಯೆ-304 ಪ್ರಕರಣದ ದ್ವೀತಿಯ ಸಂಪರ್ಕದಲ್ಲಿದ್ದರು. ಈ ವ್ಯಕ್ತಿಯು ಬಟ್ಟೆ ವ್ಯಾಪಾರ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ವ್ಯಕ್ತಿಗೆ ತಂದೆ-ತಾಯಿ, ಹೆಂಡತಿ ಸೇರಿದಂತೆ ಇಬ್ಬರು ಮಕ್ಕಳು ಇದ್ದು, ಇವರೆಲ್ಲರನ್ನು ಮುಂಜಾಗ್ರತಾ ಕ್ರಮವಾಗಿ ನಿಗಾದಲ್ಲಿರಿಸಲಾಗಿದೆ. ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರದ ಕೊವಿಡ್-19 ನಿರ್ವಹಣೆ ನಿಯಮಗಳನ್ವಯ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಜರುಗಿಸಿ ವ್ಯಕ್ತಿ (ರೋಗಿ-370) ಇದ್ದ ಪ್ರದೇಶವನ್ನು ನರ್ಬಂಧಿತ ಪ್ರದೇಶವಾಗಿ(ಕಂಟೈನ್ಮೆಂಟ್ ಝೋನ್) ಘೋಷಿಸಿ ಸಾರ್ವಜನಿಕರು ಆ ಪ್ರದೇಶದಿಂದ ಹೊರಗೆ ಅಥವಾ ಒಳಗೆ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಪ್ರಕರಣ ದೃಢಪಟ್ಟ ಬೆನ್ನಲ್ಲೇ ಕಂಟೈನ್ಮೆಂಟ್ ಏರಿಯಾ ರಂಗನವಾಡ ಗಲ್ಲಿಗೆ ಡಿಸಿ ಎಂ.ಜಿ.ಹಿರೇಮಠ, ಎಸ್ಪಿ ಯತೀಶ್ ಎನ್. ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ಜೊತೆಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಜೊತೆಗೆ ಸ್ಥಳದಲ್ಲೇ ನಿಂತು ಅಧಿಕಾರಿಗಳ ಜೊತೆ ಮುಂದಿನ ಕ್ರಮದ ಬಗ್ಗೆ ಚರ್ಚೆ ಮಾಡಿದ್ರು.