ಗದಗ : ಪಕ್ಕದ ಬಾಗಲಕೋಟೆಯಲ್ಲಿ ಕಾಣಿಸಿಕೊಂಡ ಕೊರೊನಾ ಪಾಸಿಟಿವ್ನಿಂದ ಗದಗ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಕೊರೊನಾ ಸಂಬಂಧ ಗದಗ ಮತ್ತು ಕೊಪ್ಪಳ ಜಿಲ್ಲಾಡಳಿತಗಳಿಗೆ ಎಚ್ಚರಿಕಾ ಕ್ರಮ ಅನುಸರಿಸಲು ಬಾಗಲಕೋಟೆ ಜಿಲ್ಲಾಡಳಿತ ಪತ್ರ ಬರೆದಿದೆ.
ಈ ಕೊರೊನಾ ಪಾಸಿಟಿವ್ನಿಂದಾಗಿ 8 ಗ್ರಾಮದ ಜನರು ಭಯಭೀತರಾಗಿದ್ದಾರೆ. ಪಿ - 681, ಪಿ - 683, ಪಿ - 684, ಪಿ - 688, ಪಿ - 691 ಈ ಐವರು ಕೂಡ ಗದಗ ಮತ್ತು ಕೊಪ್ಪಳ ಜಿಲ್ಲೆಗಳ ಕೆಲವು ಗ್ರಾಮಗಳಿಗೆ ಭೇಟಿ ನೀಡಿದ್ದಾರೆ ಎಂದು ಬಾಗಲಕೋಟೆ ಜಿಲ್ಲಾಡಳಿತ ತಿಳಿಸಿದೆ.
ಐವರು ಓಡಾಡಿರುವ ರೋಣ ತಾಲೂಕಿನ 8 ಗ್ರಾಮಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲು ಸೂಚಿಸಲಾಗಿದೆ. ಬಾಗಲಕೋಟೆ ಜಿಲ್ಲಾಡಳಿತ ಹೆಸರಿಸಿರುವ ರೋಣ ತಾಲೂಕಿನ ಬಸರಕೋಡ, ಶಾಂತಗೇರಿ, ಹೊಸಹಳ್ಳಿ, ಮುಶಿಗೇರಿ, ಹೊಳೆಹಡಗಲಿ, ಕೊತಬಾಳ, ಹಿರೇಹಾಳ, ಸರ್ಜಾಪೂರ ಗ್ರಾಮಗಳಲ್ಲಿ ಜನರು ಭಯ ಭೀತರಾಗಿದ್ದಾರೆ.
ಕೂಡಲೇ ಕಾರ್ಯಾಚರಣೆ ಆರಂಭಿಸಿರುವ ಗದಗ ಜಿಲ್ಲಾಡಳಿತ ಐವರ ಪ್ರಾಥಮಿಕ ಸಂಪರ್ಕದಲ್ಲಿದ್ದ 13 ಜನ, ದ್ವಿತೀಯ ಸಂಪರ್ಕದಲ್ಲಿದ್ದ 139 ಜನರನ್ನು ತಪಾಸಣೆ ನಡೆಸಿ, ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದೆ. ಈ ಎಲ್ಲ ಜನರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. 8 ಗ್ರಾಮಗಳ ಜನರಿಗೆ ಹೋಂ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಲಾಗಿದೆ.