ಗದಗ: ಕೊರೊನಾ ವೈರಸ್ನ್ನು ತಡೆಗಟ್ಟಲು ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿವೆ. ಬಹುತೇಕ ಕೂಲಿ ಕಾರ್ಮಿಕರು, ಸ್ಲಂ ನಿವಾಸಿಗಳು, ಪ್ಲಾಸ್ಟಿಕ್ ಆಯುವವರು ಸೇರಿದಂತೆ ಹಲವಾರು ಜನರು ಪರದಾಡ್ತಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸ್ತರ ಬಣದಲ್ಲಿ, ಸುಮಾರು 200 ಜನ ಪ್ಲಾಸ್ಟಿಕ್ ಆಯುವವರು ಲಾಕ್ಡೌನ್ನಿಂದಾಗಿ ನರಕಯಾತನೆ ಅನುಭವಿಸ್ತಿದ್ದಾರೆ.
ಇಲ್ಲಿನ ಜನರಿಗೆ ಉದ್ಯೋಗವಿಲ್ಲದೇ, ನಿತ್ಯದ ಊಟಕ್ಕೂ ಪರದಾಡ್ತಿದ್ದಾರೆ. ಕೇವಲ ರೇಷನ್ ಕೊಟ್ರೆ, ಸಾಂಬಾರ ಪದಾರ್ಥಗಳಿಗೆ ಏನು ಮಾಡೋದು ಅಂತ ಚಿಂತೆಗೀಡಾಗಿದ್ದಾರೆ. ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರಿದ್ದಾರೆ. ಅವರಿಗೆ ಊಟದ ಜೊತೆಗೆ ವೈದ್ಯಕೀಯ ಉಪಚಾರಕ್ಕೂ ಕಷ್ಟವಾಗ್ತಿದೆ. ಅಧಿಕಾರಿಗಳಿಗೆ ಮನವಿ ಕೊಟ್ರೂ ಯಾರೂ ಸ್ಪಂದಿನೆ ಮಾಡ್ತಿಲ್ಲ, ಸರ್ಕಾರ ನಮಗೆ ಸಹಾಯ ಮಾಡಬೇಕು ಎಂದು ಅಳಲು ತೋಡಿಕೊಳ್ತಿದ್ದಾರೆ.
ಪಕ್ಕದಲ್ಲೇ ಪುರಸಭೆ ಸದಸ್ಯರಿದ್ರೂ ನಮ್ಮ ಕಡೆ ತಿರುಗಿ ನೋಡ್ತಿಲ್ಲ. ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸುತ್ತಿದ್ದಾರೆ. ಇಲ್ಲಿ ನಮಗೆ ಯಾವುದೇ ಸರ್ಕಾರದಿಂದ ಸೌಲಭ್ಯಗಳನ್ನು ನೀಡ್ತಿಲ್ಲ. ನಮ್ಮ ಮಹಿಳೆಯರು ರಾತ್ರಿ ಹೊತ್ತಿನಲ್ಲಿ ಸ್ನಾನ ಮಾಡ್ತಾರೆ. ಸ್ನಾನಕ್ಕೆ ಮನೆ ಚಿಕ್ಕದಾಗಿರೋದ್ರಿಂದ ಇಲ್ಲಿನ ಮಹಿಳೆಯರೆಲ್ಲರೂ ಹೊರಗಡೆ ರಸ್ತೆಯಲ್ಲಿ ನಿಂತು ಸ್ನಾನ ಮಾಡ್ತಾರೆ. ಜೊತೆಗೆ ಇಲ್ಲಿ ಶೌಚಾಲಯಗಳನ್ನೂ ಸಹ ಕಟ್ಟಿಸಿಕೊಟ್ಟಿಲ್ಲ. ಮನೆಗಳಂತೂ ಮರೀಚಿಕೆಯಾಗಿವೆ. ಪ್ರತಿದಿನವೂ ಪ್ಲಾಸ್ಟಿಕ್ ಆಯ್ದು ಬದುಕುವ ನಮಗೆ ಸದ್ಯ ಒಂದು ಹೊತ್ತಿನ ಊಟಕ್ಕೂ ಪರದಾಡೋ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮನ್ನು ಕಣ್ಣು ತೆರೆದು ನೋಡಿ ಎಂದು ನಿವಾಸಿಗಳು ಆಗ್ರಹಿಸುತ್ತಿದ್ದಾರೆ.