ಗದಗ: ಜಿಲ್ಲೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಿಂಚಿನ ಸಂಚಾರ ಮಾಡಿದ್ದಾರೆ. ರೈತರೊಂದಿಗೊಂದು ದಿನ ಕಾರ್ಯಕ್ರಮದ ಅಂಗವಾಗಿ ನರಗುಂದ ಪಟ್ಟಣ ಹಾಗೂ ತಾಲೂಕಿನ ಹಲವು ಗ್ರಾಮಗಳಿಗೆ, ಜಮೀನುಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಮೊದಲು ನರಗುಂದಕ್ಕೆ ಭೇಟಿ ನೀಡಿ, ಹುತಾತ್ಮ ರೈತನ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಭೈರನಹಟ್ಟಿ ಗ್ರಾಮದಲ್ಲಿ ನಡೆದ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ವೇಳೆ ಟ್ರ್ಯಾಕ್ಟರ್ ಚಾಲನೆ, ಉಳುವೆ ಮಾಡಿದರು. ಯಂತ್ರಗಳ ಸಹಾಯದಿಂದ ಗೋವಿನಜೋಳ ರಾಶಿ ಮಾಡುವ ಯಂತ್ರವನ್ನು ಪರಿಚಯಿಸಿದರು.
ಕೃಷಿ ಸಚಿವರ ಫೋಟೋಶೂಟ್!
ಆದರೆ ನಂತ್ರ ಕೃಷಿ ಸಚಿವರ ದಿನದ ಹೆಚ್ಚು ಸಮಯ ಪೋಟೋಶೂಟ್ನಲ್ಲೇ ಕಳೆದು ಹೋಯಿತು. ಭೈರನಹಟ್ಟಿ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆದಿದ್ದ ಜಮೀನೊಂದರಲ್ಲಿ ಕೃಷಿ ಸಚಿವರು ಭರ್ಜರಿ ಫೋಟೋಶೂಟ್ ನಡೆಸಿದರು. ತಲೆಗೆ ಪೇಟ, ಪಂಚೆ ಹಾಕಿ ಪಕ್ಕಾ ರೈತನಂತೆ ಪೋಸ್ ಕೊಟ್ಟು ಫೋಟೋ ಶೂಟ್ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೆಲಹೊತ್ತು ಸಚಿವ ಸಿ.ಸಿ ಪಾಟೀಲ್ ಮತ್ತು ಸಂಸದ ಪಿ.ಸಿ ಗದ್ದಿಗೌಡರು ಸಹ ಭಾಗಿಯಾಗಿದ್ದರು. ಆದರೆ ಬಿ ಸಿ ಪಾಟೀಲರ ಫೋಟೋಶೂಟ್ಗೆ ಅವರು ಸಹ ದಂಗಾಗಿ ಹೋಗಿದ್ರು.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕೃಷಿಗೆ ಸಂಬಂಧಿಸಿದಂತೆ ರೈತರಿಗೆ ಮಾಹಿತಿ ನೀಡುವ ಈ ಕಾರ್ಯಕ್ರಮ ಅನ್ನದಾತರಿಗೆ ಅನುಕೂಲವಾಗಲಿದೆ ಎಂದರು.
ಇದನ್ನೂ ಓದಿ: ಗೋ ಹತ್ಯೆ ನಿಷೇಧ ಕಾಯ್ದೆ ತರುವಲ್ಲಿ ಆಸಕ್ತಿ; ಆದರೆ ಸರ್ಕಾರಿ ಗೋ ಶಾಲೆ ಸ್ಥಾಪಿಸುವಲ್ಲಿ ಮಾತ್ರ ನಿರಾಸಕ್ತಿ?
ಕೃಷಿ ಇಲಾಖೆ ಉತ್ತಮವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಫೋಟೋಶೂಟ್ಗೂ ಮೊದಲು ನರಗುಂದ ತಾಲೂಕಿನ ಭೈರನಹಟ್ಟಿ, ಶಿರೋಳ, ಗಂಗಾಪುರ, ಕೊಣ್ಣೂರನಲ್ಲಿ ರೈತರ ಜೊತೆ ಸಂವಾದ ಏರ್ಪಡಿಸಿತ್ತು. ರೈತರು ತಮ್ಮ ಸಮಸ್ಯೆಗಳನ್ನು ಸಚಿವರ ಎದುರು ತೋಡಿಕೊಂಡರು.
ಈ ಕಾರ್ಯಕ್ರಮದಿಂದ ನಮಗೆಲ್ಲ ತುಂಬಾ ಅನುಕೂಲ ಆಗಿದೆ ಅಂತ ರೈತರು ಸಹ ಸಂತಸ ವ್ಯಕ್ತಪಡಿಸಿದರು. ಈ ಭಾಗದಲ್ಲಿ ಮಲಪ್ರಭಾ ನದಿಯ ಪ್ರವಾಹದಿಂದ ಬಹಳಷ್ಟು ರೈತರ ಬೆಳೆಹಾನಿ ಸಂಭವಿಸಿ ಸಂಕಷ್ಟ ಎದುರಿಸುತ್ತಿದ್ದರು. ಈ ಸಂಬಂಧ ರೈತರ ಸಮಸ್ಯೆಗಳನ್ನ ಆಲಿಸಿದ್ದು, ಬಹಳ ಅನುಕೂಲ ಆಗಿದೆ ಅಂತ ಖುಷಿ ಪಟ್ಟರು.