ಗದಗ: ಈ ಉಪಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಕೋಮಾ ಸ್ಥಿತಿಗೆ ತಲುಪುತ್ತದೆ ಎಂದು ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಪಶ್ಚಿಮ ಪದವೀಧರರ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಅವರು ಉಪಚುನಾವಣೆಗೆ ಸಂಬಂಧಿಸಿದಂತೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ಆರ್.ಆರ್ ನಗರ ಹಾಗೂ ಶಿರಾ ಎರಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಶತಸಿದ್ಧ. ಈ ಉಪಚುನಾವಣೆಯಲ್ಲಿ ಸೋಲುವ ಮೂಲಕ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು. ಈಗಾಗಲೇ ದೇಶದ ಹಲವು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಪ್ರತಿಪಕ್ಷ ಸ್ಥಾನದಲ್ಲಿ ಕೂರುವ ಅರ್ಹತೆಯೂ ಆ ಪಕ್ಷಕ್ಕಿಲ್ಲ ಎಂದರು.
ಜೆಡಿಎಸ್, ಕಾಂಗ್ರೆಸ್ ಎರಡೂ ಪಕ್ಷಗಳು ಅಸ್ತಿತ್ವಕ್ಕಾಗಿ ಹೊಡೆದಾಡುತ್ತಿವೆ. ಕಾಂಗ್ರೆಸ್ಗೆ ಕರ್ನಾಟಕದಲ್ಲಿ ಸ್ವಲ್ಪ ಉಸಿರು ಇದೆ. ಆ ಉಸಿರು ಗಟ್ಟಿಯಾಗಿ ಇಟ್ಟುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಈ ಉಪಚುನಾವಣೆ ಫಲಿತಾಂಶ ಬಂದ ಬಳಿಕ ಅದು ಕೂಡ ಕಳೆದುಕೊಂಡು ಕೋಮಾ ಸ್ಥಿತಿಗೆ ತಲುಪುತ್ತದೆ ಎಂದರು.
ಈ ಹಿಂದೆ ನಾನು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯನ್ನು ಅನೈತಿಕ ಸಂಬಂಧ ಸರ್ಕಾರ ಅಂತ ಹೇಳಿದ್ದೆ. ಅನೈತಿಕ ಸಂಬಂಧ ಇವತ್ತು ನಿಜವಾಗಿದೆ. ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಕೈ-ಕೈ ಹಿಡಿದುಕೊಂಡ ಫೋಟೋವನ್ನು ಅವರಿಗೆ ಒಂದು ಸಾರಿ ನೋಡಿ ಅಂತ ಹೇಳಿ ಎಂದು ಗೇಲಿ ಮಾಡಿದರು.
ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದ ಕುರಿತು ಪ್ರತಿಕ್ರಿಯಿಸಿದ ಅವರು, ಒಂದು ಕಡೆ ಪ್ರವಾಹ, ಮತ್ತೊಂದೆಡೆ ಈ ಉಪಚುನಾವಣೆ. ಎಲ್ಲ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಪಕ್ಷ ಎಲ್ಲದಕ್ಕೂ ತಯಾರಿ ಮಾಡಿಕೊಂಡಿದೆ. ಕಂದಾಯ ಸಚಿವರು ಪ್ರವಾಸ ಮಾಡಿದ್ದಾರೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಭೇಟಿ ನೀಡಿ ಜನರ ಕಷ್ಟ ನಷ್ಟಕ್ಕೆ ಸ್ಪಂದನೆ ಮಾಡುತ್ತಿದ್ದಾರೆ. ಸಂಬಂಧಿಸಿದ ಸಚಿವರು, ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ಸಂಪೂರ್ಣ ಜವಾಬ್ದಾರಿ ಕೊಟ್ಟಿದ್ದೇವೆ. ಅಧಿಕಾರಿಗಳು ಎಲ್ಲ ರೀತಿಯ ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.