ಗದಗ : ಕಾಂಗ್ರೆಸ್ನವರು ಮೋದಿಯವರನ್ನು ವಿರೋಧ ಮಾಡ್ತಾ, ಮಾಡ್ತಾ ಈಗ ದೇಶವನ್ನೇ ವಿರೋಧ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗವಾಡಿದ್ದಾರೆ.
ನಗರದ ಮುನ್ಸಿಪಲ್ ಕಾಲೇಜ್ ಮೈದಾನದಲ್ಲಿ ನಡೆದ ಪೌರತ್ವ ಕಾಯ್ದೆ ತಿದ್ದುಪಡಿ ಬೆಂಬಲಿಸಿ ಎಂಬ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಮೂರುವರೆ ಕೋಟಿ ಬಾಂಗ್ಲಾ ದೇಶದವರು ನಮ್ಮ ದೇಶದಲ್ಲಿ ಅಕ್ರಮವಾಗಿ ಬಂದು ವಾಸವಿದ್ದಾರೆ. ಕಾಂಗ್ರೆಸ್ನವರು ಮೋದಿಯವರನ್ನು ವಿರೋಧ ಮಾಡ್ತಾ, ಮಾಡ್ತಾ ಈಗ ದೇಶವನ್ನೇ ವಿರೋಧ ಮಾಡುತ್ತಿದ್ದಾರೆ ಎಂದು ಗುಡುಗಿದ್ರು.
2014 ರ ಮೊದಲು ದೇಶದ ಹಲವು ಕಡೆ ಬಾಂಬ್ ಸ್ಫೋಟ ಆಗುತ್ತಿದ್ದವು. ನರೇಂದ್ರ ಮೋದಿ ಆಡಳಿತಕ್ಕೆ ಬಂದ ಮೇಲೆ ದೇಶದಲ್ಲಿ ಒಂದೇ ಒಂದು ಸ್ಫೋಟವಾಗಿಲ್ಲ. ಪಾಕಿಸ್ತಾನಕ್ಕೆ ಹೆದರಿಕೆ ಹುಟ್ಟಿಸಿದ್ದೇವೆ. ಈಗ ಭಿಕ್ಷೆ ಪಾತ್ರೆ ಇಡ್ಕೊಂಡು ಅಡ್ಡಾಡ್ತಿದೆ. ಇಂದು ಪಾಕಿಸ್ತಾನ ಜಗತ್ತಿನಲ್ಲಿ ಒಂಟಿಯಾಗಿದೆ ಎಂದು ವ್ಯಂಗ್ಯವಾಡಿದರು.
ಇನ್ನು ಉರಿ ಸೆಕ್ಟರ್ನಲ್ಲಿ ಹೋಗಿ ಹೊಡೆದು ಬಂದ್ವಿ. ಅದರಿಂದ ಪಾಕಿಸ್ತಾನಕ್ಕೆ ಉರಿ ಹತ್ತಬೇಕಿತ್ತು. ಆದರೆ ದುರ್ದೈವ ಕಾಂಗ್ರೆಸ್ನವರಿಗೆ ಉರಿ ಹತಿತು. ಇನ್ನು ರಾಯಚೂರಿನ ಕ್ಯಾಂಪ್ ಒಂದರಲ್ಲಿ ಇನ್ನು ನಾಲ್ಕೈದು ಸಾವಿರ ಜನರಿಗೆ ಪೌರತ್ವ ಸಿಕ್ಕಿಲ್ಲ. ಅವರು ಬಿಜೆಪಿಗೆ ಓಟು ಹಾಕಿದ್ದಾರೆ. ಅಲ್ಲಿ ನೀರು ಕೊಟ್ಟಿಲ್ಲ, ರಸ್ತೆ ಮಾಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಶಿವಕುಮಾರ್ ಉದಾಸಿ, ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ ಪಾಟೀಲ್, ಶಾಸಕರಗಳಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಎಸ್.ವಿ ಸಂಕನೂರ, ಬಿಜೆಪಿ ನೂತನ ಜಿಲ್ಲಾ ಅಧ್ಯಕ್ಷ ಮೋಹನ್ ಮಾಳಶೆಟ್ಟರ್, ಅನಿಲ ಮೆಣಸಿನಕಾಯಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.