ಗದಗ: ಶಾಲೆಗಳ ಪುನರಾರಂಭ ಕುರಿತು ಪಾಲಕರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಹರ್ಬಲ್ ಪ್ರಾಡಕ್ಟ್ ಕುರಿತು ಪ್ರಚಾರ ಮಾಡಿದ ಆರೋಪ ಗದಗದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ವಿರುದ್ಧ ಕೇಳಿಬಂದಿದೆ.
ಶಾಲೆಗಳ ಪುನರಾರಂಭ ಕುರಿತು ಪಾಲಕರ ಅಭಿಪ್ರಾಯ ಸಂಗ್ರಹ ಸಭೆ ಏರ್ಪಡಿಸಲಾಗಿತ್ತು. ಇದನ್ನೇ ಬಂಡವಾಳವಾಗಿಟ್ಟುಕೊಂಡ ಶಿಕ್ಷಣ ಸಂಸ್ಥೆ, ಚಲನಚಿತ್ರ ನಟಿ ಪಂಕಜ ರವಿಶಂಕರ್ ಹಾಗೂ ಇನ್ನಿಬ್ಬರನ್ನು ಕರೆತಂದು ಹರ್ಬಲ್ ಪ್ರಾಡಕ್ಟ್ ಮಾರ್ಕೆಟಿಂಗ್ ಮಾಡಿದೆ ಎನ್ನಲಾಗುತ್ತಿದೆ. ಗುರುವಾರ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ 300ಕ್ಕೂ ಹೆಚ್ಚು ಪಾಲಕರನ್ನು ಸೇರಿಸಿ ಸಭೆ ನಡೆಸಲಾಗಿದೆ. ಅಷ್ಟೇ ಅಲ್ಲದೆ, ಬಲವಂತವಾಗಿ ಪಾಲಕರಿಂದ ಶುಲ್ಕ ವಸೂಲಿಗೂ ಸಂಸ್ಥೆ ಮುಂದಾಗಿದೆ. ಮೇ 25 ರೊಳಗೆ 50ರಷ್ಟು ಶುಲ್ಕ ಕಟ್ಟಲೇಬೇಕು. ಇಲ್ಲವಾದಲ್ಲಿ ನಿಮ್ಮ ಮಕ್ಕಳನ್ನು ಶಾಲೆಯಲ್ಲಿ ಮುಂದುವರೆಸುವ ಇಚ್ಛೆ ಇಲ್ಲ ಎಂದು ಭಾವಿಸಿ ಬೇರೆಯವರಿಗೆ ಅಡ್ಮಿಷನ್ ಕೊಡುತ್ತೇವೆ ಎನ್ನುವ ಮಾಹಿತಿಯನ್ನು ಪತ್ರದ ಮೂಲಕ ಆಡಳಿತ ಮಂಡಳಿ ತಿಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ, ಸಂಸ್ಥೆಯ ಮುಖ್ಯಸ್ಥ ಎಸ್.ವೈ ಚಿಕ್ಕಟ್ಟಿ ಅವರನ್ನು ಪಾಲಕರು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರ ಜಿಲ್ಲಾಡಳಿತದ ಗಮನದಲ್ಲಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.