ಗದಗ: ಉತ್ತರಕರ್ನಾಟಕದ ಹಲವು ಜಿಲ್ಲೆಗಳ ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ. ರಾಜ್ಯದಲ್ಲಿ ಎಂದೂ ಆಗದ ಜಲಪ್ರಳಯ ಉಂಟಾಗಿ ಲಕ್ಷಾಂತರ ಮನೆಗಳು ನೀರಿನಲ್ಲಿ ಮುಳುಗಿವೆ. ಇಷ್ಟೆಲ್ಲಾ ಆದರೂ ಇನ್ನೂ ರಾಜ್ಯಕ್ಕೆ ಒಂದು ನಯಾಪೈಸೆ ಬಿಡುಗಡೆಯಾಗಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾಗಿರೋ ಭೀಕರ ಪ್ರವಾಹದ ಪರಿಹಾರಕ್ಕಾಗಿ ಗದಗ ಡಿಸಿ ಅವರಿಗೆ ಮನವಿ ಸಲ್ಲಿಸಿದ ಅವರು, ಈ ವೇಳೆ ಪಿಎಂ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರದವರು ಇಲ್ಲಿಗೆ ಬಂದು ದೆಹಲಿಗೆ ಹೋದ ಮೇಲೆ ಹಣ ಬಿಡುಗಡೆ ಮಾಡ್ತಾರೆ. ಇದು ರಾಜ್ಯಕ್ಕೆ ಮಾತ್ರ ಅನ್ವಯ. ಆಂಧ್ರ, ತಮಿಳುನಾಡಿಗೆಲ್ಲ ಪಿಎಂ ಅವರೇ ತೆಗೆದುಕೊಂಡು ಹೋಗಿ ಹಣ ಕೊಡ್ತಾರೆ. ಪಿಎಂ ಭೇಟಿಗೆ ನಿನ್ನೆ ಹಲವು ಮುಖಂಡರುಗಳು ಯಡಿಯೂರಪ್ಪನವರ ಜೊತೆಗೆ ಹೋಗಿದ್ದಾರೆ. ಆದರೆ, ಪರಿಹಾರವಾಗಿ ಒಂದು ನಯಾ ಪೈಸೆ ಕೊಡುವ ಬಗ್ಗೆ ಮಾತನಾಡಿಲ್ಲ. ಇದು ನಮಗೆ, ಕರ್ನಾಟಕ ರಾಜ್ಯಕ್ಕೆ ಮಾಡಿದ ಅಗೌರವ ಎಂದರು.
ಕೇಂದ್ರ ಸರ್ಕಾರ ಕರ್ನಾಟಕವನ್ನು ಗುಲಾಮರ ರೀತಿಯಲ್ಲಿ ಕಾಣುತ್ತಿದೆ. ಪ್ರಧಾನಮಂತ್ರಿ ಕೂಡಲೇ ಕರ್ನಾಟಕಕ್ಕೆ ಬಂದು 50 ಸಾವಿರ ಕೋಟಿ ರೂಪಾಯಿ ಪರಿಹಾರ ಮೊದಲನೇ ಕಂತಿನಲ್ಲಿ ನೀಡಬೇಕು. ರಾಜ್ಯದ ಸಂಸತ್ ಸದಸ್ಯರು ಹಣ ಕೊಡಿಸಿ. ಇಲ್ಲವಾದಲ್ಲಿ ರಾಜೀನಾಮೆ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ವೇಳೆ ರಾಜ್ಯಕ್ಕೆ ಪ್ರಧಾನಮಂತ್ರಿ ಬರದಿದ್ದರೆ, ರಾಜ್ಯಾದ್ಯಂತ ಹೋರಾಟ ಮಾಡೋದಾಗಿ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.