ಗದಗ: ಕಾಂಗ್ರೆಸ್ ಪಕ್ಷದವರ ನಡುವಳಿಕೆ ಮತ್ತು ಹೇಳಿಕೆ ಚಿಟ್ಟು ತರಿಸುವಂತಿದೆ ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಹೇಳಿದರು. ನಗರದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ನಾವೆಲ್ಲ ಚುನಾಯಿತ ಪ್ರತಿನಿಧಿಗಳು. ರಾಜ್ಯವನ್ನ ಆಡಳಿತ ಮಾಡಿದ‌್ದೇವೆ. ಯಾವ ಭಾಷೆ ಉಪಯೋಗ ಮಾಡಬೇಕೆಂದು ಸಿದ್ದರಾಮಯ್ಯ ಕಲಿತುಕೊಳ್ಳಬೇಕು. ನಿನ್ನೆ ದಿನ ಡಿಕೆ ಶಿವಕುಮಾರ್ ಮಾತನಾಡಿದ ಪದ ಪ್ರಯೋಗ ಬಹಳ ಅಶ್ಲೀಲವಾದದ್ದು ಇವರು ರಾಷ್ಟ್ರೀಯ ಪಕ್ಷದ ಓರ್ವ ರಾಜ್ಯ ಘಟಕದ ಅಧ್ಯಕ್ಷರು. ಹೇಳಿಕೆಗೆ ಇತಿ-ಮಿತಿ ಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕನಸಿನಲ್ಲಿ ಮುಖ್ಯಮಂತ್ರಿ ಆಗಿದ್ದೇವೆ ಅಂತಾ ಅಂದುಕೊಂಡಿದ್ದಾರೆ. ಕೀಳು ಮಟ್ಟದ ಭಾಷೆ ಪ್ರಯೋಗ ಯಾರಿಗೂ ಶೋಭೆ ತರುವುದಿಲ್ಲ. ಅವರು ಕೀಳು ಮಟ್ಟದ ಶಬ್ದ ಪ್ರಯೋಗ ನಿಲ್ಲಿಸಲಿ ಎಂದು ನಾನು ಮನವಿ ಮಾಡುವೆ. ನಮ್ಮ ಹತ್ತಿರವೂ ಬೇಕಾದಂಥ ಶಬ್ದ ಭಂಡಾರ ಇದೆ. ಪದ, ಪುಂಜಗಳಿದಾವೆ. ಆದ್ರೆ ನಮ್ಮ ಪಕ್ಷ, ಸಂಸ್ಕೃತಿ, ಸಂಘಟನೆ ಅಂಥದ್ದನ್ನ ಕಲಿಸಿಕೊಟ್ಟಿಲ್ಲ. ನಾವು ಬಾಯಿ ಮುಚ್ಚಿಕೊಂಡು ಸುಮ್ಮನಿದ್ದೇವೆ ಅಂದ್ರೆ ಅದು ನಮ್ಮ ದೌರ್ಬಲ್ಯವಲ್ಲ ಎಂದರು.
ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ: ನಾನು 13 ಬಜೆಟ್ಗಳನ್ನು ಮಂಡಿಸಿದಂತಹ ಮುಖ್ಯಮಂತ್ರಿ ಅಂತ ಹೇಳಿಕೊಳ್ಳುತ್ತಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅದನ್ನು ಕೊಡುತ್ತೇವೆ, ಇದನ್ನು ಕೊಡುತ್ತೇವೆ ಅಂತ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ತಾವು ಹೇಳಿದ ಘೋಷಣೆಗಳನ್ನು ಈಡೇರಿಸಲಿಕ್ಕೆ ಎಷ್ಟು ದುಡ್ಡು ಬೇಕೆಂದು ಲೆಕ್ಕ ಹಾಕಿ ಹೇಳಲಿ. ಕರ್ನಾಟಕದ ರೆವಿನ್ಯೂ ಇನ್ಕಮ್ ಲೆಕ್ಕ ಹಾಕಿ ಹೇಳಲಿ. ಅಬ್ಬಬ್ಬಾ ಎಂದರೂ ಎರಡು ಲಕ್ಷ ಐವತ್ತು ಸಾವಿರ ಕೋಟಿ ನಮ್ಮ ಬಜೆಟ್ ಇದೆ.
ಇವರು ಘೋಷಣೆ ಮಾಡಿರೋ ಕೆಲಸಗಳಿಗೆ ಎಷ್ಟು ಹಣ ಬೇಕೆಂದು ಲೆಕ್ಕ ಹಾಕಲಿ. ಅತೀ ಹೆಚ್ಚಿನ ಸಾಲ ಮಾಡಿಟ್ಟು ಹೋದ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಸಿದ್ದರಾಮಯ್ಯ ಅವರಿಗೆ ಇದೆ. ಇಷ್ಟೆಲ್ಲ ಇದ್ದು ಹುಚ್ಚರಂತೆ ಕರ್ನಾಟಕದ ಜನರನ್ನು ಮರಳು ಮಾಡೋಕೆ ಹೊರಟಿದ್ದಾರೆ ಎಂದು ಸಚಿವರು ವಾಗ್ದಾಳಿ ನಡೆಸಿದರು.
ನಾವು ಘೋಷಣೆ ಮಾಡಿದ್ದನ್ನ ಈಡೇರಿಸಲಿಕ್ಕೆ ಆಗುತ್ತಾ ಅಂತ ಸ್ವತಃ ಡಿಕೆ ಶಿವಕುಮಾರ್ ಅವರೇ ಸಿದ್ದರಾಮಯ್ಯ ಅವರನ್ನು ಕೇಳುತ್ತಿದ್ದಾರೆ. ಅವರೊಳಗೆ ವಿಶ್ವಾಸ ಇಲ್ಲದಂತಾಗಿದೆ. ದ್ವಂದ್ವ, ಗೊಂದಲದಲ್ಲಿ ಕಾಂಗ್ರೆಸ್ ಪಕ್ಷವಿದೆ. ಅಖಂಡತ್ವದಿಂದ ಮುಂದಿನ ಚುನಾವಣೆಯನ್ನ ನಾವು ಎದುರಿಸಲಿದ್ದೇವೆ. ಸಂಪೂರ್ಣ ಬಹುಮತದಿಂದ ನಾವೇ ಮುಂದಿನ ಅಗಸ್ಟ್ 15ರ ಧ್ವಜಾರೋಹಣ ಮಾಡಲಿದ್ದೇವೆ ಎಂದರು.
ಇದನ್ನೂ ಓದಿ: ಮೋದಿ ಅಮಿತ್ ಶಾ ಬಂದ ಕಡೆ ಕಮಲ ಅರಳುತ್ತೆ: ಸಚಿವ ಆರ್.ಅಶೋಕ್ ವಿಶ್ವಾಸ
ಬಿಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ: ಗೋಡ್ಸೆ ರಾಜಕಾರಣ ಬೇಕೋ ಅಥವಾ ಗಾಂಧಿಯ ಅಹಿಂಸೆಯ ರಾಜಕಾರಣ ಬೇಕೋ? ಅನ್ನೋ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹರಿಪ್ರಸಾದ ಮಾತಿಗೆ ಮಾಧ್ಯಮದವರು ಬೆಲೆ ಕೊಡಬಾರದು. ಹರಿಪ್ರಸಾದ್ರ ಸಂಸ್ಕೃತಿ ಎಲ್ಲಿಂದ ಬಂದಿದೆ ಅಂತ ನೋಡಿಕೊಳ್ಳಿ. ಅವರು ಯಾರ ಶಿಷ್ಯ? ಇವರ ಗುರು ಯಾರು? ಅಂತ ಹಿನ್ನೆಲೆ ತೆಗೆದುಕೊಳ್ಳಿ. ಕೊತ್ವಾಲ್ ರಾಮಚಂದ್ರನ ಜೊತೆ ಸ್ನೇಹದಿಂದ ಇದ್ದವರು ಹರಿಪ್ರಸಾದ್. ಕೊತ್ವಾಲ್ ರಾಮಚಂದ್ರ ಯಾರು, ಏನಿದ್ದ ಅನ್ನೋದನ್ನ ಈಗ ತೆಗೆಯಬೇಕಾ? ಬೇಡ. ಇದೀಗ ಸಂಭ್ರದಿಂದ ಗಣರಾಜ್ಯೋತ್ಸವ ಆಚರಿಸುತ್ತೇವೆ, ಆಚರಿಸೋಣ. ಹರಿಪ್ರಸಾದ ಮಾತಿಗೆ ನಾನು ಉತ್ತರ ಕೊಡೋದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಮೋದಿ ಕರ್ನಾಟಕಕ್ಕೆ ಎಷ್ಟು ಬಾರಿ ಬಂದರೂ ಏನೂ ಪ್ರಯೋಜನವಿಲ್ಲ : ಡಿ.ಕೆ ಶಿವಕುಮಾರ್ ವ್ಯಂಗ್ಯ