ಗದಗ: ಫ್ಲೈಓವರ್ಗೆ ಸಾವರ್ಕರ್ ಹೆಸರಿಡೋ ವಿಚಾರವಾಗಿ ಕಾಂಗ್ರೆಸ್ನವರು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿಸಿ ಪಾಟೀಲ್ ಗರಂ ಆಗಿದ್ದಾರೆ.
ಗದಗದ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವರ್ಕರ್ ಹೆಸರಿಡದೇ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹೆಸರಿಡಬೇಕಾ? ಸಾವರ್ಕರ್ ತ್ಯಾಗ, ಬಲಿದಾನ, ಕಾಲಾಪಾನಿ ಶಿಕ್ಷೆ, ಸೆಲ್ಯುಲಾರ್ ಜೈಲುವಾಸದ ಬಗ್ಗೆ ಕಾಂಗ್ರೆಸ್ನವರು ಮೊದಲು ತಿಳಿಯಲಿ. ವೀರ ಸಾವರ್ಕರ್ ಬಗ್ಗೆ ಮಾತನಾಡುವಂತಹ ಯೋಗ್ಯತೆ ಯಾವೊಬ್ಬ ಕಾಂಗ್ರೆಸಿಗರಿಗೂ ಇಲ್ಲ. ಸಾವರ್ಕರ್ ಬಗ್ಗೆ ಅವರೇನು ಹೇಳ್ತಾರೆ? ಅವರಿಗೆ ನೆಹರೂ ಸಂಸ್ಕೃತಿಯ ಭಾರತವೊಂದೇ ಗೊತ್ತು ಎಂದು ಕಿಡಿಕಾರಿದರು.
ಅವರಿಗೆ ತ್ಯಾಗ ಬಲಿದಾನ ಮಾಡಿದ ಸುಭಾಶ್ಚಂದ್ರ ಬೋಸ್, ವೀರ ಸಾವರ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್, ಲೋಕಮಾನ್ಯ ತಿಲಕ ಇವರು ಯಾರೂ ಗೊತ್ತಿಲ್ಲ. ಸಾವರ್ಕರ್ ಬಿಜೆಪಿಯವರಾ? ಅವರಿದ್ದಾಗ ಬಿಜೆಪಿ ಇತ್ತಾ ಎಂದು ಪ್ರಶ್ನೆ ಮಾಡಿದರು.
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜ್, ರಾಜೀವ್ ಗಾಂಧಿ ರೋಡ್ ಅಂತೆಲ್ಲ ಇದೆ. ಎಲ್ಲಾದರೂ ನರೇಂದ್ರ ಮೋದಿ ರೋಡ್, ಯಡಿಯೂರಪ್ಪ ರೋಡ್ ಅಂತ ಇದೆಯಾ? ದೇಶವನ್ನು ಇವರೇ ಕಟ್ಟಿ ಬೆಳೆಸಿ ಉತ್ತುಂಗಕ್ಕೆ ತಂದ್ರಾ ಎಂದು ಸಿಡಿಮಿಡಿಗೊಂಡ ಅವರು, ಹೇಳೋದು ಆಚಾರ ತಿನ್ನೋದು ಬದನೆಕಾಯಿ ಅಂತಾರಲ್ಲ, ಹಾಗಾಗಿದೆ ಕಾಂಗ್ರೆಸ್ನವರ ಪರಿಸ್ಥಿತಿ ಎಂದರು.