ಗದಗ : ಆಸ್ಪತ್ರೆಯ ಸಿಬ್ಬಂದಿಗೆ ಆವಾಜ್ ಹಾಕಿದ ವ್ಯಕ್ತಿಗೆ ಪಿಪಿಇ ಕಿಟ್ ಹಾಕಿಕೊಂಡು ಕೆಲಸ ಮಾಡುವಂತೆ ಡಾಕ್ಟರ್ವೊಬ್ಬರು ಸಲಹೆ ನೀಡಿದ್ದು, ಸದ್ಯ ಭಾರೀ ಚರ್ಚೆಯಾಗುತ್ತಿದೆ.
ನಗರದ ಎನ್.ಬಿ ಪಾಟೀಲ್ ಆಸ್ಪತ್ರೆಗೆ ಇತ್ತೀಚೆಗೆ ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ ಮೂಲದ 80 ವರ್ಷದ ಮಹಿಳಾ ಕೋವಿಡ್ ಸೋಂಕಿತರೊಬ್ಬರನ್ನು ದಾಖಲಿಸಲಾಗಿತ್ತು. ಇವರಿಗೆ ವಾರಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಆದರೆ, ವೆಂಟಿಲೇಟರ್ ಅವಶ್ಯಕತೆ ಇಲ್ಲದಿದ್ದರೂ, ವೆಂಟಿಲೇಟರ್ ಹಾಕಿದ್ದರು ಅಂತ ಕಿರಿಕ್ ತೆಗೆದಿದ್ದ ರೋಗಿಯ ಸಂಬಂಧಿಯೊಬ್ಬರು ಆಸ್ಪತ್ರೆಯ ಸಿಬ್ಬಂದಿಗೆ ಆವಾಜ್ ಹಾಕಿದ್ದಾರೆ.
ಸೋಂಕಿತ ಮಹಿಳೆಯ ಪುತ್ರನ ಮೊಬೈಲ್ಗೆ ಕರೆ ಮಾಡಿ ಆಸ್ಪತ್ರೆಯ ರೆಸೆಪ್ಷನಿಸ್ಟ್ಗಳ ಜೊತೆ ಅವಾಚ್ಛ ಶಬ್ದಗಳಿಂದ ಮಾತನಾಡಿದ್ದಾರೆ. ನಾನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂದು ಹೇಳಿಕೊಂಡು ಮಾತನಾಡಿದ ಅನಾಮಿಕ ವ್ಯಕ್ತಿ, ಕೂಡಲೇ ರೋಗಿಯನ್ನು ಜಿಲ್ಲಾ ಆಸ್ಪತ್ರೆಗೆ ರೆಫರ್ ಮಾಡಿ ಅಂತ ಅವಾಜ್ ಹಾಕಿದ್ದಾನೆ. ಆದರೆ, ವೈದ್ಯ ಪವನ್ ಪಾಟೀಲ್ ರೋಗಿಯನ್ನು ಜಿಲ್ಲಾಸ್ಪತ್ರೆಗೆ ಕಳುಹಿಸದೆ ಆವಾಜ್ ಹಾಕಿದ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ನಂತರ ವಿಜಯ್ ಕುಮಾರ್ ವಸ್ತ್ರದ ಎಂಬ ವ್ಯಕ್ತಿಯೇ ಈ ಕುಕೃತ್ಯ ಎಸಗಿದ್ದು, ಆತನನ್ನು ಕರೆದು ಆಸ್ಪತ್ರೆಯಲ್ಲಿ ಕೆಲಸ ಮಾಡು. ವೈದ್ಯರ ಸಮಸ್ಯೆ ಅರ್ಥವಾಗುತ್ತೆ ಅಂತ ಸಲಹೆ ನೀಡಿದ್ದಾರೆ. ಬಂದು ಕೆಲಸ ಮಾಡ್ತೀನಿ ಅಂದಿದ್ದ ವ್ಯಕ್ತಿ ಈವರೆಗೆ ಪತ್ತೆಯಾಗಿಲ್ವಂತೆ. ಈ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಎನ್ ಬಿ ಪಾಟೀಲ್ ಆಸ್ಪತ್ರೆಯ ವೈದ್ಯ ಪವನ್ ಪಾಟೀಲ್ ರೋಗಿಯ ಪರಿಸ್ಥಿತಿ ಗೊತ್ತಿಲ್ಲದೆ, ನಮ್ಮ ಸಿಬ್ಬಂದಿಗೆ ಆವಾಜ್ ಹಾಕಿದ್ದಾರೆ. ಆ ವ್ಯಕ್ತಿಗೆ ನಮ್ಮ ಕಷ್ಟ ಏನು ಅನ್ನೋದನ್ನು ಇಲ್ಲಿ ಬಂದು ಕೆಲಸ ಮಾಡು ಅಂತ ಅವನಿಗೆ ಸಲಹೆ ನೀಡಿದ್ದೇನೆ. ಈ ಬಗ್ಗೆ ದೂರ ಸಹ ನೀಡಿದ್ದೇನೆ ಎಂದು ತಿಳಿಸಿದ್ದಾರೆ.