ಗದಗ: ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನ ಕೈಬಿಡಬೇಕು ಎಂಬುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಟ್ಟಿದ್ದು ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಮತ್ತು ಸಚಿವ ಸಂಪುಟ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇನ್ನು, ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಜೀನ್ಸ್ ಬಗ್ಗೆ ಟ್ವೀಟ್ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರ ವರ್ತನೆಯನ್ನು ನೋಡಿದರೆ, ಯಾರ ಜೀನ್ಸ್ ಎಲ್ಲಿದೆ ಎಂಬುದು ಗೊತ್ತಾಗುತ್ತೆ. ಅವರ ಹೇಳಿಕೆ, ವೋಲೈಕೆ ರಾಜಕಾರಣ, ತುಷ್ಠೀಕರಣದ ರಾಜಕಾರಣ ನೋಡಿದರೆ ಕುಮಾರಸ್ವಾಮಿ ಜೀನ್ಸ್ ಎಲ್ಲಿದೆ ಎಂಬುದು ಗೊತ್ತಾಗುತ್ತದೆ ಎಂದರು. ಅವರಂತೆ ಕೆಳಮಟ್ಟಕ್ಕಿಳಿದು ಟೀಕೆ ಮಾಡೋದಿಲ್ಲ ಎಂದು ಸಚಿವ ಪಾಟೀಲ್ ಟಾಂಗ್ ಕೊಟ್ಟರು.
ಇನ್ನು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಸಿಬ್ಬಂದಿಗೆ ಡ್ರೆಸ್ ಕೋಡ್ ಬರಲಿದೆ. ಪೊಲೀಸ್, ಫಾರೆಸ್ಟ್ ಇಲಾಖೆ ಮಾದರಿಯಲ್ಲಿ ಇಲಾಖೆಯ ಸಿಬ್ಬಂದಿಗೂ ಯುನಿಫಾರ್ಮ್ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು. ದಾಳಿಗೆ ಹೋದ ಸಂದರ್ಭದಲ್ಲಿ ಅವರದ್ದೇ ಆದ ಡ್ರೆಸ್ಕೋಡ್ ಇದ್ದರೆ ಹೆದರುತ್ತಾರೆ. ಇಲ್ಲವೆಂದ್ರೆ ಅದೆಷ್ಟೋ ಸಮಸ್ಯೆಗಳಾಗಿವೆ. ಈ ನಿಟ್ಟಿನಲ್ಲಿ ಸಿಎಂ ಗಮನಕ್ಕೆ ತಂದು ಯೋಜನೆ ಜಾರಿಗೊಳಿಸುತ್ತೇವೆ. ಮರಳು ನೀತಿ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ, ಅಕ್ರಮ ಮರಳು ಗಣಿಗಾರಿಕೆಗೆ ಆದಷ್ಟು ಬೇಗ ಇತಿಶ್ರೀ ಹಾಡುತ್ತೇವೆ ಎಂದು ಸಚಿವ ಸಿ ಸಿ ಪಾಟೀಲ್ ತಿಳಿಸಿದರು.